ಅಲಿಗಂಜ್ ನಕಲಿ ಎನ್‌ಕೌಂಟರ್ ಪ್ರಕರಣ : ಮಾಜಿ ಉಪಮೇಯರ್, ಇತರ ಮೂವರಿಗೆ ಜೀವಾವಧಿ ಶಿಕ್ಷೆ

Update: 2018-06-30 14:16 GMT

ಲಕ್ನೊ, ಜೂ.30: 24 ವರ್ಷಗಳ ಹಿಂದೆ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೊದ ಸ್ಥಳೀಯ ನ್ಯಾಯಾಲಯವು ಇಲ್ಲಿನ ಮಾಜಿ ಉಪ ಮೇಯರ್ ಹಾಗೂ ಇತರ ಮೂವರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ. ಲಕ್ನೊದ ಮಾಜಿ ಉಪ ಮೇಯರ್ ಅಭಯ್ ಸೇಠ್, ಅಲಿಗಂಜ್ ವ್ಯಾಪಾರಿಗಳ ಸಂಘದ ಅಂದಿನ ಪ್ರಧಾನ ಕಾರ್ಯದರ್ಶಿ ಅಶೋಕ್ ಮಿಶ್ರಾ ಹಾಗೂ ಇಬ್ಬರು ಪೊಲೀಸ್ ಪೇದೆಗಳಾದ ರಾಮಚಂದ್ರ ಸಿಂಗ್ ಚಂದೆಲ್ ಮತ್ತು ಶಿವಭೂಷಣ್ ತಿವಾರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲಿಗಂಜ್‌ನ ಅಂದಿನ ಪೊಲೀಸ್ ಠಾಣಾಧಿಕಾರಿ ಡಿ.ಡಿ.ಎಸ್ ರಾಥೋಡ್ ಹಾಗೂ ಪೇದೆ ಮುನ್ಶಿಲಾಲ್ ಹೆಸರು ಕೂಡಾ ಪೊಲೀಸರ ದೋಷಾರೋಪ ಪಟ್ಟಿಯಲ್ಲಿದ್ದರೂ ಅವರಿಬ್ಬರೂ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು.

1994ರ ಫೆಬ್ರವರಿ 26ರಂದು ಅಲಿಗಂಜ್ ಪೊಲೀಸರು ತಾವು ಗ್ಯಾಂಗ್‌ಸ್ಟರ್ ಗೋಪಾಲ್ ಮಿಶ್ರಾನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿಸಿದ್ದರು. ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ 1997ರ ಡಿಸೆಂಬರ್ 11ರಂದು ಸಿಐಡಿಯ ವಿಶೇಷ ವಿಭಾಗ (ಸಿಬಿ-ಸಿಐಡಿ) ಕ್ಕೆ ಒಪ್ಪಿಸಿ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು.

ತನಿಖೆಯ ವೇಳೆ ಇದೊಂದು ನಕಲಿ ಎನ್‌ಕೌಂಟರ್ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸಿಬಿ-ಸಿಐಡಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆ ಹಾಗೂ ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯಕ್ಕೆ ಮೃತನ ಪರ ವಕೀಲರು, ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಆತನ ತಾಯಿ ಸೇರಿದಂತೆ ಹದಿಮೂರು ಸಾಕ್ಷಿಗಳನ್ನು ಹಾಜರುಪಡಿಸಿದ್ದರು.

ವಕೀಲರ ಪ್ರಕಾರ, ಅಶೋಕ್ ಮಿಶ್ರಾ ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ತೊಡಗಿದ್ದು ಅಲಿಗಂಜ್‌ನಲ್ಲಿ ಕಟ್ಟಡವೊಂದನ್ನು ನಿರ್ಮಿಸಿದ್ದ. ಅವರಿಂದ ಪ್ರಭಾವಿತರಾದ ಗೋಪಾಲ್ ತಾನೂ ಅಶೋಕ್‌ರಂತೆ ಕಟ್ಟಡ ನಿರ್ಮಾಣ ವ್ಯವಹಾರಕ್ಕೆ ಕೈಹಾಕಿದ್ದ. ಸ್ವಲ್ಪ ಸಮಯದ ನಂತರ ಗೋಪಾಲ್ ಸ್ಥಳೀಯ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದ. ಆದರೆ ಈ ಜಮೀನಿನ ಮೇಲೆ ಅಶೋಕ್ ಮೊದಲೇ ಕಣ್ಣಿಟ್ಟಿದ್ದ. ಘಟನೆ ನಡೆದ ದಿನ ಪೊಲೀಸರು ಗೋಪಾಲ್ ಮನೆಯ ಮೇಲೆ ದಾಳಿ ನಡೆಸಿ ಆತನ ಮೇಲೆ ಗುಂಡು ಹಾರಿಸಿದ್ದರು. ನಂತರ ಅಶೋಕ್ ನೀಡಿದ್ದ ದೇಶೀಯ ನಿರ್ಮಿತ ಪಿಸ್ತೂಲೊಂದನ್ನು ಆತನ ಕೈಯಲ್ಲಿ ಇಟ್ಟಿದ್ದರು. ಇಡೀ ಘಟನೆ ನಡೆಯುವ ವೇಳೆ ಅಶೋಕ್ ಮತ್ತು ಅಭಯ್ ಸೇಠ್ ಕೂಡಾ ಪೊಲೀಸ್ ತಂಡದ ಜೊತೆಗಿದ್ದರು ಎಂದು ವಕೀಲರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News