ಚಿಕ್ಕಮಗಳೂರು: ತುಂಗಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಪತ್ತೆ

Update: 2018-06-30 15:23 GMT

ಚಿಕ್ಕಮಗಳೂರು, ಜೂ.30: ಕಳೆದ ನಾಲ್ಕು ದಿನಗಳ ಹಿಂದೆ ತುಂಗಾ ನದಿಯ ಪ್ರವಾಕ್ಕೆ ಸಿಲುಕಿ ನಾಪತ್ತೆಯಾಗಿದ್ದ ರೈತ ಉಮೇಶ್ ಅವರ ಮೃತ ದೇಹ ಕೊನೆಗೂ ಪತ್ತೆಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣ ದಳ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ದಿನಗಳ ಕಾಲ ಶೋಧ ಕಾರ್ಯ ನಡೆಸಿ ನದಿಯಲ್ಲಿ ಹೂತು ಹೋಗಿದ್ದ ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಸಣ್ಣ ಕೃಷಿಕರಾಗಿದ್ದ ಉಮೇಶ್ ಅವರ ಶವ ನೆಮ್ಮಾರು ಸಮೀಪದಲ್ಲೇ ಹರಿಯುವ ತುಂಗಾ ನದಿಯಲ್ಲಿ ಶನಿವಾರ ಬೆಳಗ್ಗೆ 11ರ ಹೊತ್ತಿಗೆ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ಸಿಕ್ಕಿದೆ ಎಂದು ತಿಳಿದು ಬಂದಿದ್ದು, ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಉಮೇಶ್ ಅವರ ಪತ್ತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ದಳ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆಮ್ಮಾರು ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ಸತತ 2 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಿದ್ದರು. ಎನ್‍ಡಿಆರ್‍ಎಫ್ ತಂಡ ಎರಡು ಬೋಟ್‍ಗಳ ಸಹಾಯದಿಂದ ಉಮೇಶ್ ಅವರ ಮೃತ ದೇಹಕ್ಕಾಗಿ ನೆಮ್ಮಾರು ಗ್ರಾಮದಿಂದ ಸುಮಾರು 8 ಕಿಮೀ ದೂರವಿರುವ ಶೃಂಗೇರಿ ಪಟ್ಟಣದ ವರೆಗೂ ಶೋಧ ನಡೆಸಿದ್ದರು.

ಘಟನೆಯ ವಿವರ: ನೆಮ್ಮಾರು ಗ್ರಾಮದ ರೈತ ಉಮೇಶ್ ತುಂಗಾ ನದಿ ಪಕ್ಕದಲ್ಲೇ ಇರುವ ತಮ್ಮ ಜಮೀನಿನ ಬಳಿ ಮೀನಿಗೆ ಬಲೆ ಹಾಕುವ ಸಲುವಾಗಿ ಕಳೆದ ಬುಧವಾರ ರಾತ್ರಿ ನದಿ ದಡಕ್ಕೆ ಹೋಗಿದ್ದರು. ಮೀನು ಹಿಡಿಯಲು ಹೋದ ಉಮೇಶ್ ತಡ ರಾತ್ರಿಯಾದರೂ ಮನೆಗೆ ಹಿಂದಿರುಗದ ಕಾರಣ ಭಯಭೀತರಾದ ಕುಟುಂಬದ ಸದಸ್ಯರು ನದಿ ಸಮೀಪಕ್ಕೆ ಬಂದು ಹುಡುಕಾಡಿದರೂ ಉಮೇಶ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಗುರುವಾರ ಬೆಳಗ್ಗೆಯಾದರೂ ಅವರ ಬಗ್ಗೆ ಸುಳಿವು ದೊರಕಾದ ಕಾರಣ ಭಯಭೀತರಾದ ಕುಟುಂಬದವರು ತುಂಗಾ ನದಿ ನೀರಿನ ಪ್ರವಾಹದಲ್ಲಿ ಉಮೇಶ್ ಕೊಚ್ಚಿ ಹೋಗಿರಬಹುದೆಂದು ಶಂಕಿಸಿ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದರು. 

ದೂರು ದಾಖಲಿಸಿಕೊಂಡ ಶೃಂಗೇರಿ ಪೊಲೀಸರು ಹಾಗೂ ತಾಲೂಕು ಆಡಳಿತ ಗುರುವಾರ ಬೆಳಗ್ಗೆಯಿಂದ ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ನೆಮ್ಮಾರು ಗ್ರಾಮದ ತುಂಗಾ ನದಿಯಲ್ಲಿ ಉಮೇಶ್ ಅವರಿಗಾಗಿ ಶೋಧ ಕಾರ್ಯಕ್ಕೆ ಇಳಿದಿದ್ದರು. ಆದರೆ ಉಮೇಶ್ ಅವರ ಬಗ್ಗೆ ಯಾವುದೇ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ ಎನ್‍ಡಿಆರ್‍ಎಫ್ ತಂಡದಿಂದ ನದಿಯಲ್ಲಿ ಶೋಧ ನಡೆಸಲು ನಿರ್ಧರಿಸಿದ್ದರಿಂದ ಎನ್‍ಡಿಆರ್‍ಎಫ್‍ನ ಸುಮಾರು 15 ಸಿಬ್ಬಂದಿ ಎರಡು ಬೋಟ್‍ಗಳಲ್ಲಿ ತುಂಗಾ ನದಿಯಲ್ಲಿ ಉಡುಕಾಟ ಆರಂಭಿಸಿದ್ದರು. ಶುಕ್ರವಾರ ರಾತ್ರಿಯಾದರೂ ಉಮೇಶ್ ಬಗ್ಗೆ ತಂಡಕ್ಕೆ ಯಾವುದೇ ಮಾಹಿತಿ ಲಬ್ಯವಾಗಿರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಮತ್ತೆ ಎನ್‍ಡಿಆರ್‍ಎಫ್ ಸಿಬ್ಬಂದಿ ನೆಮ್ಮಾರು ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದಾಗ ನೆಮ್ಮಾರು ಗ್ರಾಮದ ಸಮೀಪದಲ್ಲಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಉಮೇಶ್ ಅವರ ಮೃತ ದೇಹ ಪತ್ತೆಯಾಗಿದೆ.

ಮೃತ ದೇಹವನ್ನು ನದಿಯಿಂದ ಹೊರ ತೆಗೆದ ಸುದ್ದಿ ತಿಳಿದು ಕಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು. ಉಮೇಶ್ ಮೃತ ದೇಹವನ್ನು ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಕೆಲ ರೈತ ಮುಖಂಡರು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕಂದಾಯ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದರು. ಮೃತ ದೇಹವನ್ನು ಪತ್ತೆ ಮಾಡುವಲ್ಲಿ ಮೂರು ದಿನಗಳಿಂದ ಶ್ರಮಿಸಿದ ಪೊಲೀಸರು, ಅಗ್ನಿಶಾಮಕದಳ ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಜಮಪ್ರತಿನಿಧಿಗಳು ಈ ವೇಳೆ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News