ಚಿಕ್ಕಮಗಳೂರು: ಮಲೆನಾಡಿನ ಅಪರೂಪದ ಕಾಡು ಪಕ್ಷಿಗಳ ಭೇಟೆಯಾಡುತ್ತಿದ್ದವರ ಬಂಧನ

Update: 2018-06-30 17:50 GMT

ಚಿಕ್ಕಮಗಳೂರು, ಜೂ.30: ಮಾಂಸಕ್ಕಾಗಿ ಕಾಡು ಪಕ್ಷಿಗಳನ್ನು ಭೇಟೆಯಾಡುತ್ತಿದ್ದ ಇಬ್ಬರು ಭೇಟೆಗಾರರನ್ನು ಇಲ್ಲಿನ ವಲಯಾರಣ್ಯಾಧಿಕಾರಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಭೇಟೆಗಾರರನ್ನು ತಾಲೂಕಿನ ಕಾಮೇನಹಳ್ಳಿ ಗ್ರಾಮದ ಪ್ರಭು, ಶ್ರೀನಿವಾಸ್ ಎಂದು ಗುರುತಿಸಾಗಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.

ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಶಿಲ್ಪಾ ಅವರಿಗೆ ಶನಿವಾರ ಮುಂಜಾನೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ತಾಲೂಕಿನ ಕಾಮೇನಹಳ್ಳಿ ಅರಣ್ಯದಲ್ಲಿ ಅಪರೂಪದ ಕಾಡು ಪಕ್ಷಿಗಳನ್ನು ಭೇಟೆಯಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಹಕ್ಕಿಗಳನ್ನು ಬೇಟೆಯಾಡಲು ಬಳಸುತ್ತಿದ್ದ ಪಂಜರ ಸೇರಿದಂತೆ ಸುಮಾರು 21ಕ್ಕೂ ಹೆಚ್ಚು ಅಪರೂಪದ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಕೆಲ ಪಕ್ಷಿಗಳು ಮೃತಪಟ್ಟಿದ್ದು, ಇನ್ನು ಕೆಲವು ಪಕ್ಷಿಗಳು ಜೀವಂತವಾಗಿ ಸಿಕ್ಕಿವೆ ಎಂದು ತಿಳಿದು ಬಂದಿದೆ. ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವ ಪಕ್ಷಿಗಳು ಮಲೆನಾಡಿನಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿಗಳಾಗಿದ್ದು, ಮೈನಾ, ಸ್ಪಾಟೆಡ್ ಡವ್, ರಿಂಗ್‍ನೆಕ್ಕಡ್ ಡವ್, ಗೀಜಗಾ, ಗೂಬೆ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳನ್ನು ಈ ಭೇಟೆಗಾರರು ಪ್ರತಿದಿನ ಭೇಟೆಯಾಡುತ್ತಿದ್ದರೆಂದು ತಿಳಿದು ಬಂದಿದೆ.

ಬಂಧಿತರು ಅರಣ್ಯಾಧಿಕಾರಿಗಳಿಗೆ ನೀಡಿದ ಮಾಹಿತಿ ಬೆಚ್ಚಿ ಬೀಳಿಸುವಂತಿದ್ದು, ಕಾಡು ಜಾತಿಯ ಪಕ್ಷಿಗಳ ಮಾಂಸಕ್ಕೆ ಪ್ರವಾಸಿಗರಿಂದ ಭಾರೀ ಬೇಡಿಕೆ ಇರುವುದರಿಂದ ಚಿಕ್ಕಮಗಳೂರಿನ ಕೆಲ ಮಾಂಸಹಾರಿ ಹೊಟೇಲ್ ಹಾಗೂ ರೆಸ್ಟೋರೆಂಟ್‍ಗಳಿಗೆ ಭೇಟೆಯಾಡಿದ ಪಕ್ಷಿಗಳನ್ನು ಮಾರಾಟ ಮಾಡುತ್ತಿದ್ದೇವೆಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News