ಭಾರತದ ಅಧಿಕಾರಿಗಳೊಂದಿಗೆ ಚೌಕಾಸಿ: ಮಲ್ಯ ನಿರಾಕರಣೆ

Update: 2018-06-30 18:56 GMT

ಹೊಸದಿಲ್ಲಿ, ಜೂ.30: ತನಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ವಿಷಯದಲ್ಲಿ ಭಾರತದ ಅಧಿಕಾರಿಗಳೊಂದಿಗೆ ತಾನು ಚೌಕಾಸಿ ಮಾಡಿದ್ದೆ ಎಂಬ ಆರೋಪವನ್ನು ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ನಿರಾಕರಿಸಿದ್ದಾರೆ.

ನಾನು ಚೌಕಾಸಿ ಮನವಿ ಸಲ್ಲಿಸಿದ್ದೇನೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಮೊದಲು ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯನ್ನು ಓದಿಕೊಳ್ಳಿ ಎಂದು ಅಧಿಕಾರಿಗಳಿಗೆ ಗೌರವಪೂರ್ವಕವಾಗಿ ಸಲಹೆ ನೀಡುತ್ತಿದ್ದೇನೆ. ನನ್ನ ಆಸ್ತಿಯ ವಿವರವನ್ನು ಸಲ್ಲಿಸಿದ ನ್ಯಾಯಾಲಯದಲ್ಲಿ ಇಡಿ ಅಧಿಕಾರಿಗಳು ತಮ್ಮ ‘ಚೌಕಾಸಿ ಮನವಿ ವಾದ’ವನ್ನು ಮುಂದಿರಿಸಲು ಆಹ್ವಾನ ನೀಡುತ್ತಿದ್ದೇನೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಮುಟ್ಟುಗೋಲು ಹಾಕಿಕೊಂಡಿರುವ ತನ್ನ ಆಸ್ತಿಗಳನ್ನು ಬಿಟ್ಟುಕೊಟ್ಟರೆ ತಾನು ಸಾಲ ಪಾವತಿಸುತ್ತೇನೆ ಎಂದು ಮಲ್ಯ ಮುಂದಿರಿಸಿದ್ದ ಪ್ರಸ್ತಾಪವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಳ್ಳಿಹಾಕಿದ್ದರು. ಈ ಪ್ರಸ್ತಾಪವು ಚೌಕಾಸಿ ಮನವಿಯಾಗಿದೆ. ತನ್ನನ್ನು ಬ್ರಿಟನ್‌ನಿಂದ ಗಡೀಪಾರು ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ತನ್ನ ವಾದಕ್ಕೆ ಬಲ ನೀಡುವ ಹುನ್ನಾರದಿಂದ ಮಲ್ಯ ಈ ಪ್ರಸ್ತಾಪ ಮಾಡಿದ್ದಾರೆ ಎಂದು ಇಡಿ ಅಧಿಕಾರಿಗಳು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News