ಆಗಸ್ಟ್ 27ರಂದು ಹಾಜರಾಗುವಂತೆ ವಿಜಯ್ ಮಲ್ಯಗೆ ವಿಶೇಷ ನ್ಯಾಯಾಲಯ ಸಮನ್ಸ್

Update: 2018-06-30 18:59 GMT

ಹೊಸದಿಲ್ಲಿ, ಜೂ. 30: ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಿಗೆ 9000 ಕೋ. ರೂ. ಗೂ ಅಧಿಕ ವಂಚಿಸಿದ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಇಲ್ಲಿನ ವಿಶೇಷ ಪಿಎಂಎಲ್‌ಎ (ಹಣ ಅಕ್ರಮ ವರ್ಗಾವಣೆ ಕಾಯ್ದೆ) ನ್ಯಾಯಾಲಯ ಶನಿವಾರ ಸಮನ್ಸ್ ಜಾರಿ ಮಾಡಿದೆ. ಆಗಸ್ಟ್ 27ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ವಿಜಯ್ ಮಲ್ಯ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಸಲ್ಲಿಸಿದ ಎರಡನೇ ಆರೋಪ ಪಟ್ಟಿ ಹಾಗೂ ಅನಂತರ ‘ಪರಾರಿಯಾದ ಆರ್ಥಿಕ ಅಪರಾಧಿ’ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಜೂನ್ 22ರಂದು ಸಲ್ಲಿಸಿದ ಮನವಿ ಗಮನಿಸಿ ಪಿಎಂಎಲ್‌ಎ ಪ್ರಕರಣಗಳನ್ನು ನಿರ್ವಹಿಸುತ್ತಿರುವ ವಿಶೇಷ ನ್ಯಾಯಾಧೀಶ ಎಂ.ಎಸ್. ಆಝ್ಮಿ ಅವರು ಮಲ್ಯನಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬ್ಯಾಂಕ್ ಸಾಲ ಬಾಕಿ ಉಳಿಸಿ ಪರಾರಿಯಾದವರನ್ನು ನಿರ್ವಹಿಸಲು ಮೋದಿ ಸರಕಾರ ಇತ್ತೀಚೆಗೆ ರೂಪಿಸಿದ ಈ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲು.

ಪರಾರಿಯಾಗಿರುವ ಮಲ್ಯ ಹಾಗೂ ಇತರ ಆರ್ಥಿಕ ಅಪರಾಧಿಗಳ 12,000 ಕೋ. ರೂ. ಸೊತ್ತನ್ನು ಕೂಡಲೇ ವಶಪಡಿಸಿಕೊಳ್ಳಲು ಅನುಮತಿ ಕೋರಿ ಕೂಡ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿತ್ತು.

ಒಂದು ವೇಳೆ ಆಗಸ್ಟ್ 27ರಂದು ನ್ಯಾಯಾಲಯದ ಮುಂದೆ ಹಾಜರಾಗದೇ ಇದ್ದರೆ ಮಲ್ಯ ಅವರನ್ನು ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಘೋಷಿಸಲಾಗುತ್ತದೆ ಹಾಗೂ ಅವರ ಸೊತ್ತನ್ನು ವಶಪಡಿಸಿಕೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News