​ದೇಶದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ ಬಗ್ಗೆ ಗೊತ್ತೇ?

Update: 2018-07-01 04:09 GMT

ಚೆನ್ನೈ, ಜು.1: ಸತ್ಯಶ್ರೀ ಶರ್ಮಿಳಾ ದೇಶದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2008ರವರೆಗೂ ಉಧಾಕುಮಾರ್ ಆಗಿದ್ದ ಸತ್ಯಶ್ರೀ, ಸೇಲಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದ್ದಾರೆ.

ಕಾನೂನು ಕ್ಷೇತ್ರಕ್ಕೆ ಆಕೆಯನ್ನು ಸ್ವಾಗತಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಪಿ.ಎನ್.ಪ್ರಕಾಶ್ ಅವರು, "ನನ್ನ ಜೀವಿತಾವಧಿಯಲ್ಲೇ ಲಿಂಗ ಪರಿವರ್ತಿತ ವ್ಯಕ್ತಿಯೊಬ್ಬರು ಹೈಕೋರ್ಟ್ ನ್ಯಾಯಮೂರ್ತಿಯಾಗುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.

"ತಮಿಳುನಾಡು ಮತ್ತು ಪುದುಚೇರಿ ವಕೀಲರ ಸಂಘದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ದೇಶದ ಮೊದಲ ತೃತೀಯ ಲಿಂಗಿ ವಕೀಲೆ ಎನಿಸಿಕೊಂಡಿದ್ದೇನೆ. ಜೀವನದಲ್ಲಿ ನಾನು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ. ನನ್ನ ಸಮುದಾಯದ ಮಂದಿ ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ಏರಬೇಕು ಎನ್ನುವುದು ನನ್ನ ನಿರೀಕ್ಷೆ" ಎಂದು ಶರ್ಮಿಳಾ ಟ್ವೀಟ್ ಮಾಡಿದ್ದಾರೆ.

ತಮ್ಮ ವೃತ್ತಿಯ ಬಹುಭಾಗವನ್ನು ಈ ಸಮುದಾಯದ ಕಲ್ಯಾಣಕ್ಕೆ ಮೀಸಲಿಡುವುದಾಗಿ ಅವರು ಘೋಷಿಸಿದ್ದಾರೆ. ತಮ್ಮ ಹಕ್ಕುಗಳನ್ನು ಪಡೆಯಲು ಈ ಸಮುದಾಯಕ್ಕೆ ಕಾನೂನು ನೆರವು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

"ಕಾನೂನು ವೃತ್ತಿ ಸಮಾಜದ ಎಲ್ಲ ಸ್ತರದ ಜನರಿಗೂ ಮುಕ್ತವಾಗಿದೆ. ದುರ್ಬಲ ಹಾಗೂ ಅವಕಾಶ ವಂಚಿತ ವರ್ಗಕ್ಕೆ ಕಾನೂನು ವೃತ್ತಿ ಒಳ್ಳೆಯ ವೇದಿಕೆ" ಎಂದು ಭಾರತದ ವಕೀಲರ ಮಂಡಳಿ ಸಹ ಅಧ್ಯಕ್ಷ ಎಸ್.ಪ್ರಭಾಕರನ್ ಹೇಳಿದ್ದಾರೆ.

ಮೂಲತಃ ರಾಮನಾಥಪುರಂ ಜಿಲ್ಲೆಯವರಾದ ಸತ್ಯಶ್ರೀ, 2007ರಲ್ಲೇ ಸೇಲಂ ಸೆಂಟ್ರಲ್ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರೂ, ತೃತೀಯ ಲಿಂಗಿ ವರ್ಗದಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳಲು ಇದುವರೆಗೂ ಕಾದಿದ್ದರು. 2007ರಲ್ಲಿ ಕುಟುಂಬ ತೊರೆದು, ತೃತೀಯ ಲಿಂಗಿ ಸಮುದಾಯಕ್ಕೆ ಕಾಂಚಿಪುರಂನಲ್ಲಿ ಸೇರಿಕೊಂಡಿದ್ದರು. ಕುಟುಂಬ ತೊರೆಯಲು ಸಮಾಜ ಕಾರಣವೇ ಹೊರತು, ನನ್ನ ಪೋಷಕರು ಇಂದಿಗೂ ನನ್ನನ್ನು ಅಪಾರವಾಗಿ ಪ್ರೀತಿಸುತ್ತಾರೆ ಎಂದು ಸತ್ಯಶ್ರೀ ಹೇಳಿದ್ದಾರೆ.

ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟಗಾರ ಬಾನು ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶ ಇಲ್ಲದಿದ್ದರೆ, ಇಂಥ ಸಾಮಾಜಿಕ ಗೌರವ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News