ಪತ್ರಕರ್ತರು ರಾಜಕೀಯ ಸೋಂಕು ಹಚ್ಚಿಕೊಂಡರೆ ಹೊರಬರುವುದು ಕಷ್ಟ: ಕೆ.ಎಸ್.ಈಶ್ವರಪ್ಪ

Update: 2018-07-01 16:52 GMT

ಶಿವಮೊಗ್ಗ, ಜು. 1: ಪತ್ರಕರ್ತರು ರಾಜಕೀಯ ಸೋಂಕು ಹಚ್ಚಿಕೊಂಡರೆ ಅದರಿಂದ ಹೊರ ಬರುವುದು ಕಷ್ಟ. ಇದನ್ನು ಮನಗಂಡು, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದ್ದಾರೆ. 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಹ್ಯಾದ್ರಿ ಕಾಲೇಜ್‍ನ ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಮೇಲೆ ಗುರುತರ ಜವಾಬ್ದಾರಿಯಿದೆ. ವರದಿಗಳ ಮೂಲಕ ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡಬೇಕು. ಈ ರೀತಿ ಮಾಡುವಾಗ ರಾಜಕೀಯ ಸೋಂಕು ಅಂಟಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು. ಈ ಕಾರಣದಿಂದ ರಾಜಕೀಯ ಸೋಂಕಿನಿಂದ ಅಂತರ ಕಾಯ್ದುಕೊಂಡು ವೃತ್ತಿಯಲ್ಲಿ ಮುನ್ನಡೆದರೆ, ಬರವಣಿಗೆಯಲ್ಲಿಯೂ ತೂಕ ಇರುತ್ತದೆ. ನಿಷ್ಪಕ್ಷಪಾತವಾಗಿ ಬರೆಯಬಹುದಾಗಿದೆ. ಅಂತಹವರ ಬಗ್ಗೆ ಒಳ್ಳೆಯ ಅಭಿಪ್ರಾಯವು ವ್ಯಕ್ತವಾಗುತ್ತದೆ ಎಂದು ಪತ್ರಕರ್ತರಿಗೆ ತಿಳಿಸಿದರು. 

ಪತ್ರಿಕೆಗಳು ತನ್ನದೆ ಆದ ಮಹತ್ವ ಹೊಂದಿವೆ. ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿವೆ. ಈ ಹಿಂದೆ ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಗಮನಿಸಿ, ಕೆಲ ನೀರಾವರಿ ಯೋಜನೆಗಳಲ್ಲಿ ಸುಧಾರಣೆ ತಂದಿದ್ದೆ ಎಂದು ಹೇಳಿದರು. 

ಸಮಾಜದ ಪ್ರತಿಯೊಂದು ಅಂಶಗಳನ್ನು ಗಮನಿಸುತ್ತಾ, ಅದನ್ನು ತಲುಪಿಸುವವರಿಗೆ ತಲುಪಿಸುವ ಕೆಲಸ ಮಾಡುವುದು ಸುಲಭದ ಮಾತಲ್ಲ. ವಸ್ತುನಿಷ್ಟವಾಗಿ ಬರೆದಾಗ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಪತ್ರಕರ್ತರ ಬದುಕು ಕೂಡ ಕಷ್ಟ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿನ ನಿಷ್ಠುರವಾದ ದನಿಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಇದು ಸಾಮಾಜಿಕ ಹಿತದೃಷ್ಟಿಯಿಂದ ಅನಾರೋಗ್ಯಕರ ಬೆಳವಣಿಗೆಯಾಗಿದೆ. ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಪತ್ರಕರ್ತರು ಕೂಡ ತಮ್ಮತನವನ್ನು ಉಳಿಸಿಕೊಳ್ಳಬೇಕಿದೆ ಎಂದರು. 

ಪ್ರಸ್ತುತ ಪತ್ರಿಕಾ ವೃತ್ತಿ ಉದ್ಯಮವಾಗಿ ಪರಿವರ್ತನೆಯಾಗಿದೆ. ಕೈಗಾರಿಕಾ ಸ್ವರೂಪವನ್ನು ಪಡೆದುಕೊಂಡಿರುವುದರಿಂದ ಪತ್ರಕರ್ತರ ಖರೀದಿ ನಡೆಸುವ ಮೂಲಕ, ಮತ್ತೊಂದು ಪತ್ರಿಕೆಗೆ ಪೈಪೋಟಿ ನೀಡುವ ಕೆಲಸ ನಡೆಯುತ್ತಿದೆ. ಪತ್ರಿಕೆಯನ್ನು ಆರಂಭಿಸಿ ಜೀವನವಿಡೀ ಅದರಲ್ಲೇ ತೊಡಗಿಕೊಂಡ ಅನೇಕ ಪತ್ರಕರ್ತರು, ಇದ್ದಕ್ಕಿದ್ದಂತೆ ಪತ್ರಿಕಾ ಕಚೇರಿ ಬಾಗಿಲು ಹಾಕಿರುವ ನಿದರ್ಶನಗಳಿವೆ. ಇನ್ನು ಕೆಲವು ಪತ್ರಿಕೆಗಳು ಬೆಳಗಾಗುವುದರಲ್ಲಿ ಜನಪ್ರಿಯತೆ ಪಡೆದ ಪ್ರಸಂಗಗಳೂ ಇವೆ. ಈ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮೇಯರ್ ನಾಗರಾಜ ಕಂಕಾರಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎನ್. ರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ರವಿಕುಮಾರ್, ಹಿರಿಯ ಪತ್ರಕರ್ತ ಉಮಾಪತಿ, ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಡಾ. ಧನಂಜಯ, ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ, ವೈದ್ಯ ಸೇರಿದಂತೆ ಮೊದಲಾದವರಿದ್ದರು. 

ಭ್ರಷ್ಟಾಚಾರ-ಅಂಧಶ್ರದ್ದೆ ಜೊತೆ ಕೈಕುಲುತ್ತಿರುವ ಪತ್ರಿಕೋದ್ಯಮ : ಹಿರಿಯ ಪತ್ರಕರ್ತ ಡಿ.ಉಮಾಪತಿ
ಭ್ರಷ್ಟಾಚಾರ, ಅಂಧಶ್ರದ್ಧೆ, ಸುಳ್ಳು ಸುದ್ದಿಯ ಜೊತೆ ಪತ್ರಿಕೋದ್ಯಮ ಕೈಕುಲುಕುತ್ತಿದೆ. ಇದರಿಂದ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಾಗಿದೆ. ಪತ್ರಿಕೋದ್ಯಮ ರೋಗಗ್ರಸ್ಥವಾದರೆ ಸಮಾಜವೂ ರೋಗಗ್ರಸ್ಥವಾಗಲಿದೆ. ಈ ಕಾರಣದಿಂದ ಪತ್ರಿಕೋದ್ಯಮವನ್ನು ಸರಿದಾರಿಗೆ ತರುವ ಕೆಲಸವಾಗಬೇಕಾಗಿದೆ. ಪತ್ರಕರ್ತರು ತಮ್ಮ ಮೇಲಿರುವ ಗುರುತರ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಸಾಮಾಜಿಕ ಸಂಪರ್ಕ ಜಾಲ ತಾಣಗಳಲ್ಲಿ ಸುಳ್ಳು, ನಕಲಿ ಸುದ್ದಿಗಳ ಹಾವಳಿ ಮಿತಿ ಮೀರಿದೆ. ಸುಳ್ಳು ಸುದ್ದಿ ಸೃಷ್ಟಿಸುವ ಕಾರ್ಖಾನೆಗಳೇ ಆರಂಭವಾಗಿವೆ. ಅತ್ಯಂತ ವ್ಯವಸ್ಥಿತವಾಗಿ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಹರಡಲಾಗುತ್ತಿದೆ. ಇವು ನೈಜ ಸುದ್ದಿಗಳನ್ನೇ ಮರೆಮಾಚುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿನ ನಕಲಿ ಸುದ್ದಿಗಳು ಚುನಾವಣೆಗಳ ಮೇಲೂ ಪ್ರಭಾವ ಬೀರುತ್ತಿವೆ. ಹಾಗೆಯೇ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ಮಟ್ಟಕ್ಕೆ ವ್ಯಾಪಿಸುತ್ತಿವೆ ಎಂದು ಇದೇ ಸಂದರ್ಭದಲ್ಲಿ ಉಮಾಪತಿಯವರು ಆತಂಕ ವ್ಯಕ್ತಪಡಿಸಿದರು. 

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎನ್.ರಾಜು ಮಾತನಾಡಿ, ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಪ್ರಾಮಾಣಿಕ ಗಮನಹರಿಸುತ್ತಿಲ್ಲ. ಪತ್ರಕರ್ತರು ಹಾಗಿರಬೇಕು, ಹೀಗಿರಬೇಕು ಎಂದೆಲ್ಲ ಜನಪ್ರತಿನಿಧಿಗಳು ಉಪದೇಶ ನೀಡುತ್ತಾರೆ. ಆದರೆ ಶಾಸನ ಸಭೆಗಳಲ್ಲಿ ಪತ್ರಕರ್ತರಿಗೆ ಸೌಲತ್ತು ಕೊಡುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕನಿಷ್ಟ ಸಾರಿಗೆ, ಆರೋಗ್ಯದ ಸೌಲಭ್ಯವಾದರೂ ಪತ್ರಕರ್ತರಿಗೆ ಸಿಗಬೇಕು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News