ಮಡಿಕೇರಿ: ಅಸಮರ್ಪಕ ನಿರ್ವಹಣೆಯಿಂದಾಗಿ ಗಬ್ಬೆದ್ದು ನಾರುತ್ತಿರುವ ವಿರಾಜಪೇಟೆ ಪಟ್ಟಣದ ಶೌಚಾಲಯಗಳು

Update: 2018-07-01 17:09 GMT

ಮಡಿಕೇರಿ, ಜು.1: ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ನರೇಂದ್ರಮೋದಿ ಅವರು ಮಹಾತ್ಮ ಗಾಂಧಿ ಕಂಡ ಕನಸಿನಿಂದ ಭಾರತ ಸ್ವಚ್ಛವಾಗಬೇಕೆಂದು ಸ್ವಚ್ಛ ಭಾರತ್ ಅಭಿಯಾನ ನಡೆಸುತ್ತಿದ್ದಾರೆ. ಹಲವು ಕಡೆ ಈ ಅಭಿಯಾನ ಯಶಸ್ವಿಯೂ ಆಗಿದೆ. ಆದರೆ ಕೊಡಗಿನಲ್ಲಿ ಮಾತ್ರ ಸ್ವಚ್ಛತೆಯ ಬಗ್ಗೆ ಯಾರಿಗೂ ಕಾಳಜಿ ಇದ್ದಂತ್ತಿಲ್ಲ. ಅದರಲ್ಲೂ ವಿರಾಜಪೇಟೆ ತಾಲೂಕಿನಲ್ಲಿ ಸ್ವಚ್ಛತೆಗೆ ಆದ್ಯತೆ ಇಲ್ಲದಂತಾಗಿದ್ದು, ಪಟ್ಟಣದ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಪಟ್ಟಣ ತುಂಬಾ ಸಾರ್ವಜನಿಕರ ಬಳಕೆಗಾಗಿ ಹಲವು ಕಡೆ ಶೌಚಾಲಯಗಳನ್ನು ನಿರ್ಮಾಣ ಮಾಡಿರುವ ಪಟ್ಟಣ ಪಂಚಾಯತ್ ಅವುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಸೋತಿದೆ ಎಂದು ನಾಗರಿಕರು ಆರೋಪಿಸುತ್ತಾರೆ.

ಖಾಸಗಿ ಬಸ್ ನಿಲ್ದಾಣದ ಶೌಚಾಲಯ ಸರಿಯಾದ ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿದ್ದು, ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ. ಸುಮಾರು 20 ವರ್ಷಗಳ ಹಿಂದೆ ಬೆಂಗಳೂರಿನ ಜನ್ ಕಲ್ಯಾಣ್ ಫೌಂಡೇಶನ್ ಬೆಂಗಳೂರು ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನಿರ್ವಹಣೆಯ ಜವಬ್ದಾರಿಯನ್ನು ನೀಡಲಾಗಿತ್ತು. ಸಂಸ್ಥೆ ಶೌಚಾಲಯ ನಿರ್ವಹಣೆಗೆಂದು ಕೆಲಸಗಾರರನ್ನು ನೇಮಿಸಿಕೊಂಡು ವೇತನ ಪಾವತಿ ಮಾಡುತ್ತಾ ಕಾರ್ಯನಿರ್ವಹಿಸುತ್ತಿತ್ತು. ಅದರೆ ಇದೀಗ ಚಿತ್ರಣವೇ ಬದಲಾಗಿದ್ದು, ಶೌಚಾಲಯ ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ಶೌಚಾಲಯ ಬಳಕೆಗೆ ಸಾರ್ವಜನಿಕರಿಂದ ನಿಗಧಿತ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ನಿರ್ವಹಣೆಯ ಕೊರತೆಯಿಂದ ಅಶುಚಿತ್ವದ ವಾತಾವರಣ ಅಸಹ್ಯವನ್ನು ಮೂಡಿಸುತ್ತಿದೆ. ಮಳೆಗಾಲದಲ್ಲಿ ಬಸ್ ನಿಲ್ದಾಣದ ಮೂಲಕ ಹರಿಯುವ ನೀರು ಶೌಚಾಲಯದ ಮುಂಭಾಗದಲ್ಲಿ ಹರಿದು ಅಲ್ಲಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ. ಜೊತೆಯಲ್ಲಿ ಸೊಳ್ಳೆ, ಕ್ರಮಿ ಕೀಟಗಳ ಕಾಟವೂ ಹೆಚ್ಚಾಗಿದೆ ಎಂದು ನಾಗರಿಗಕರು ದೂರುತ್ತಾರೆ.

ಸಾರ್ವಜನಿಕರು ಶೌಚಾಲಯಕ್ಕೆ ತೆರಳುವಾಗ ಮೂಗು ಮುಚ್ಚಿಕೊಳ್ಳುವುದು ಇಲ್ಲಿ ಖಡ್ಡಾಯವಾಗಿದೆ. ಖಾಸಗಿ ಬಸ್ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು, ಬಸ್ ಸಿಬ್ಬಂದಿಗಳು ಹಾಗೂ ವರ್ತಕರು ಬಂದು ಹೋಗುತ್ತಾರೆ. ಇವರ ಅನುಕೂಲಕ್ಕೆ ಸುಸಜ್ಜಿತ ಶೌಚಾಲಯದ ಅಗತ್ಯವಿದೆ.  ಆದರೆ ಸ್ಥಳೀಯ ಆಡಳಿತ ವ್ಯವಸ್ಥೆ ಜನರ ಹಿತವನ್ನು ಕಡೆಗಣಿಸಿ ಸ್ವಚ್ಛ ಭಾರತ್ ಪರಿಕಲ್ಪನೆಗೆ ಅಪಮಾನ ಮಾಡುತ್ತಿದೆ. ಈಗಿರುವ ಶೌಚಾಲಯದ ಮೇಲ್ಭಾಗದಲ್ಲಿ ನೂತನವಾಗಿ ಹೈಟೆಕ್ ಶೌಚಾಗೃಹ ನಿರ್ಮಾಣವಾಗಿ ಆರು ತಿಂಗಳುಗಳೇ ಕಳೆದಿದೆ. ಆದರೆ ನೂತನ ಶೌಚಾಲಯವನ್ನು ಬಳಸುವ ಭಾಗ್ಯ ಸಾರ್ವಜನಿಕರಿಗೆ ಇನ್ನೂ ದೊರೆತಿಲ್ಲ. ಇದು ಖಾಸಗಿ ಬಸ್ ನಿಲ್ದಾಣದ ಶೌಚಾಲಯದ ಪರಿಸ್ಥಿತಿಯಾದರೆ ಮಾಂಸ ಮಾರುಕಟ್ಟೆಯ ಬಳಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್ ಶೌಚಾಲಯ ಬಳಕೆಗೆ ಅಯೋಗ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಕಾಡು ಬಳ್ಳಿ, ಗಿಡಗಳು ಬೆಳೆದು ಅಶುಚಿತ್ವದಿಂದ ಕೂಡಿದ್ದು, ಸಾರ್ವಜನಿಕರು ಶೌಚಾಲಯ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡಟ್ಟಿ ಚೌಕಿಯ ಬಳಿ ಪಟ್ಟಣ ಪಂಚಾಯತ್ ನಿರ್ಮಾಣ ಮಾಡಿರುವ ಶೌಚಾಲಯವನ್ನು ಕೆಲವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಮುಚ್ಚಲಾಗಿದೆ ಎನ್ನುವ ಆರೋಪವಿದೆ.
ಸರಕಾರ ಬಯಲು ಶೌಚ ಮುಕ್ತ ಸಮಾಜ ನಿರ್ಮಾಣ ಮಾಡಲು ಕೋಟಿ, ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಮತ್ತೊಂದೆಡೆ ಸ್ವಚ್ಛ ಭಾರತ್, ಸ್ವಚ್ಛ ಪರಿಸರ, ಸ್ವಚ್ಛ ಸಮಾಜ ಎಂಬ ಘೋಷಣೆಯೊಂದಿಗೆ ಹಲವು ಯೋಜನೆಗಳು ಜಾರಿಯಲ್ಲಿವೆ. ಸಾಕಷ್ಟು ಹಣ ವಿನಿಯೋಗವಾಗುತ್ತಿದ್ದರೂ ವಿರಾಜಪೇಟೆ ಪಟ್ಟಣದಲ್ಲಿ ಮಾತ್ರ ಯಾರಿಗೂ ಸ್ವಚ್ಛ ವಿರಾಜಪೇಟೆ ಬೇಡವಾಗಿದೆ. ಜನಪ್ರತಿನಿಧಿಗಳು ಯಾರೂ ಸಾರ್ವಜನಿಕ ಶೌಚಾಲಯವನ್ನು ಬಳಸದೆ ಇರುವುದರಿಂದ ಜನ ಹೇಗಿದ್ದರೇನು ಎನ್ನುವ ಜಡ್ಡುಗಟ್ಟಿದ ವಾತಾವರಣ ಆಡಳಿತ ವ್ಯವಸ್ಥೆಯಲ್ಲಿದೆ. ಒಂದು ದಿನವೂ ಪಟ್ಟಣ ಪಂಚಾಯತ್ ಪ್ರತಿನಿಧಿಗಳು ಪಟ್ಟಣದ ಜನಸಂಪರ್ಕ ಸಭೆ ನಡೆಸಿ ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸಿಲ್ಲ, ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳ ಸ್ಥಿತಿಗತಿಯ ಬಗ್ಗೆ ಪಟ್ಟಣ ಪಂಚಾಯತ್‍ಗೆ ಮಾಹಿತಿಯೇ ಇಲ್ಲದಾಗಿದೆ. ಶೌಚಾಲಯದ ಸಮಸ್ಯೆಗಳು ಮಾತ್ರವಲ್ಲದೆ ಕಸದ ಸಮಸ್ಯೆ ಕೂಡ ಪಟ್ಟಣವನ್ನು ಕಾಡುತ್ತಿದೆ. ಇನ್ನಾದರೂ ಪಟ್ಟಣ ಪಂಚಾಯತ್ ಪ್ರತಿನಿಧಿಗಳು ನಾಲ್ಕು ಗೋಡೆಗಳ ನಡುವೆ ಕಾರುಬಾರು ಮಾಡುವ ಬದಲು ಪಟ್ಟಣಕ್ಕೊಂದು ಸುತ್ತು ಬಂದು ಸಾರ್ವಜನಿಕರ ಬೇಡಿಕೆಗಳಿಗೆ ಸಕಾಲದಲ್ಲಿ ಸ್ಪಂದಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News