ದೇವರ ರಾಜಕೀಯಗಳ ಕುರಿತಂತೆ ಸುಬ್ಬಯ್ಯ

Update: 2018-07-01 18:40 GMT

. ಕೆ. ಸುಬ್ಬಯ್ಯ ನಾಡಿನ ಆತ್ಮಸಾಕ್ಷಿಯಂತೆ ಬದುಕುತ್ತಿರುವವರು. ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳಿಗೆ ಅವರ ಕೊಡುಗೆ ಅಪಾರ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರು ಸುಬ್ಬಯ್ಯ. ಬಳಿಕ ಆ ಸಂಘಟನೆಯ ವಿರುದ್ಧವೇ ಬಂಡೆದ್ದು ‘ಆರೆಸ್ಸೆಸ್ ಅಂತರಂಗ’ ಎಂಬ ಕೃತಿಯನ್ನು ಬರೆದರು. ಇದಾದ ಬಳಿಕ ಬದುಕಿನುದ್ದಕ್ಕೂ ಆರೆಸ್ಸೆಸ್ ಚಿಂತನೆಗಳ ವಿರುದ್ಧ ಸೆಣಸಾಡುತ್ತಾ ಬಂದವರು. ಈ ಸಂದರ್ಭಗಳಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆಯುತ್ತಾ ಬಂದರು. ಇತ್ತೀಚೆಗಷ್ಟೇ ಅವರ ಹಲವು ಕೃತಿಗಳು ಬಿಡುಗಡೆಗೊಂಡವು. ಅವುಗಳಲ್ಲಿ ಮುಖ್ಯವಾದುದು ‘ದೇವರು ಮತ್ತು ಧರ್ಮ’. ಸುಬ್ಬಯ್ಯನವರ ಸಮಗ್ರ ಬರಹಗಳ ಸಂಪುಟ ಮಾಲೆಯಲ್ಲಿ ಲಡಾಯಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಕೊಡಗಿನ ‘ಕೊಡಗು ಸಮಾಚಾರ’ ಪತ್ರಿಕೆಯಲ್ಲಿ ಬರೆದ ಮತ್ತು ಇತರ ಒಂದೆರಡು ಲೇಖನಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಹೆಸರೇ ಹೇಳುವಂತೆ ದೇವರ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಇಲ್ಲಿನ ಹೆಚ್ಚಿನ ಲೇಖನಗಳನ್ನು ಬರೆಯಲಾಗಿವೆ.

ಇಲ್ಲಿ ಒಟ್ಟು ಹನ್ನೊಂದು ಲೇಖನಗಳಿವೆ. ಮೊದಲ ಐದು ಲೇಖನಗಳು ದೇವರ ಕುರಿತಂತೆಯೇ ಆಗಿವೆೆ. ದೇವರ ಕುರಿತಂತೆ ಎ. ಎನ್. ಮೂರ್ತಿರಾಯರು ಮತ್ತು ಡಿ.ವಿ. ಗುಂಡಪ್ಪರವರು ಬರೆದ ಎರಡು ಪುಸ್ತಕಗಳನ್ನು ನೆಪವಾಗಿಟ್ಟುಕೊಂಡು ಇಲ್ಲಿ ದೇವರ ಹೆಸರಲ್ಲಿ ನಡೆಸುತ್ತಿರುವ ರಾಜಕೀಯಗಳನ್ನು ಚರ್ಚಿಸಲಾಗಿದೆ. ಪುರಾತನ ಕಾಲದಲ್ಲಿ ದೇವರ ಕಲ್ಪನೆ ಮತ್ತು ದೇವರ ಹೆಸರಲ್ಲಿ ಕೆಳವರ್ಗದ ಶೋಷಣೆ, ಪುರೋಹಿತರು ವಿರೂಪಗೊಳಿಸಿದ ದೇವರ ಕಥನ ಇವೆಲ್ಲವನ್ನೂ ಈ ಐದು ಲೇಖನಗಳು ಚರ್ಚಿಸುತ್ತವೆ. ಮತ್ತು ಇವನ್ನೇ ಇಟ್ಟುಕೊಂಡು ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಹೇಗೆ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುವುದನ್ನೂ ವಿವರಿಸಿದ್ದಾರೆ. ರಾಜಕೀಯ ಧಾರ್ಮಿಕತೆಯ ಮುಖವಾಡದಲ್ಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಈ ದೇಶ ಪರಕೀಯರ ದಾಳಿಗೆ ಸಿಲುಕುವುದಕ್ಕೆ ಪುರೋಹಿತರ ಕೊಡುಗೆ ಅಪಾರ ಎಂದು ಹೇಳುತ್ತಾರೆ. ನದಿಯನ್ನೂ ಸುತ್ತಿಕೊಂಡಿರುವ ಈ ದೇವರೆನ್ನುವ ರಾಜಕೀಯದ ಬಗ್ಗೆಯೂ ಅವರು ಗಮನ ಸೆಳೆಯುತ್ತಾರೆ. ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಕೆಲವು ಲೇಖನಗಳಂತೂ ಆಯಾ ಸಂದರ್ಭಕ್ಕೆ ಮೂಡಿ ಬಂದವುಗಳಾದರೂ, ಅವು ಇಂದಿಗೂ ಸಲ್ಲುವಂತಹವುಗಳಾಗಿವೆ. ಲೋಕಮಾನ್ಯ ತಿಲಕರು ಗಣೇಶೋತ್ಸವನ್ನು ಬಳಸಿರುವುದು ಸ್ವಾತಂತ್ರ ಹೋರಾಟಕ್ಕಲ್ಲ, ತಿಲಕರ ಸ್ವಾತಂತ್ರದ ಕಲ್ಪನೆಯೇ ಬೇರೆ. ಅದು ಪುರೋಹಿತಶಾಹಿ ಶಕ್ತಿಗಳಿಂದ ಪ್ರಭಾವಿತಗೊಂಡಿದೆ ಎಂದು ಪ್ರತಿಪಾದಿಸುತ್ತಾರೆ. ಹಾಗೆಯೇ ಸರಕಾರವೂ ವೌಢ್ಯಗಳ ಹಿಡಿತದಲ್ಲಿ ನರಳುತ್ತಿದೆ ಎಂದು ಅವರು ಈ ಕೃತಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕೃತಿ ವರ್ತಮಾನದ ಹಲವು ಜ್ವಲಂತ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತದೆ. 88 ಪುಟಗಳ ಈ ಕೃತಿಯ ಮುಖಬೆಲೆ 70 ರೂ. ಆಸಕ್ತರು 94802 286644 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News