ಕಾಂಗ್ರೆಸ್ ವಕ್ತಾರೆಯ ಪುತ್ರಿಯನ್ನು ಅತ್ಯಾಚಾರಗೈಯುವುದಾಗಿ ಬೆದರಿಕೆಯೊಡ್ಡಿದ ಟ್ರೋಲ್ ಪಡೆ

Update: 2018-07-02 12:20 GMT

ಹೊಸದಿಲ್ಲಿ, ಜು.2: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಮೇಲೆ ಟ್ರೋಲ್ ದಾಳಿ ನಡೆದ ಕೆಲವೇ ದಿನಗಳ ಅಂತರದಲ್ಲಿ ಇದೀಗ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಅವರಿಗೆ ಟ್ರೋಲ್ ಒಬ್ಬ ಟ್ವೀಟ್ ಮಾಡಿ ಅವರ ಪುತ್ರಿಯನ್ನು ಅತ್ಯಾಚಾರಗೈಯ್ಯುವ ಬೆದರಿಕೆ ಹಾಕಿದ್ದಾನೆ. @GirishK1605 ಎಂಬ ಟ್ವಿಟ್ಟರ್ ಹ್ಯಾಂಡಲ್ ಹೊಂದಿರುವ ವ್ಯಕ್ತಿ ಈ ಬೆದರಿಕೆಯ ಟ್ವೀಟ್ ಮಾಡಿದ್ದು ಪ್ರಿಯಾಂಕ ಈಗಾಗಲೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ತನಗೆ ಬಂದಿರುವ ಈ ಟ್ವೀಟ್ ಅನ್ನು ತಮ್ಮ ಟೈಮ್ ಲೈನ್ ನಲ್ಲಿ ಶೇರ್ ಮಾಡಿರುವ ಪ್ರಿಯಾಂಕ,  ಶ್ರೀರಾಮನ ಪ್ರೊಫೈಲ್ ಚಿತ್ರ ಹಾಕಿಕೊಂಡು ಈ ವ್ಯಕ್ತಿ ತನ್ನ ಪುತ್ರಿಯ ಬಗ್ಗೆ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದಾನೆಂದು ಹೇಳಿದ್ದಾರೆ. "ನಾನು ನಿಮ್ಮ ಪುತ್ರಿಯ ಮೇಲೆ ಬಲಾತ್ಕಾರ ನಡೆಸಬೇಕೆಂದು ಬಯಸಿದ್ದೇನೆ, ಆಕೆಯನ್ನು ನನ್ನ ಬಳಿ ಕಳುಹಿಸಿ" ಎಂದು ಆತ ಟ್ವೀಟ್ ಮಾಡಿದ್ದ.

ಈ ಟ್ವೀಟನ್ನು ಟ್ವಿಟ್ಟರಿಗರು ಖಂಡಿಸಿದ್ದು ದುಷ್ಕರ್ಮಿಗಳ ಟ್ವಿಟ್ಟರ್ ಖಾತೆಗಳಿಂದ ಬರುತ್ತಿರುವ ಇಂತಹ ನಿಂದನಾತ್ಮಕ ಟ್ವೀಟ್ ಗಳ ಬಗ್ಗೆ ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಬೆದರಿಕೆಗಳು ಬಹಿರಂಗವಾಗಿ ಬರುತ್ತಿರುವಾಗ ನಮ್ಮ ಮಕ್ಕಳು ಈ ದೇಶದಲ್ಲಿ ಹೇಗೆ ಸುರಕ್ಷಿತವಾಗಬಹುದು ಎಂದು ಒಬ್ಬ ಟ್ವಿಟ್ಟರಿಗ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News