ಕರೆ ಮಾಡಿ ಸುರಕ್ಷಿತನಾಗಿದ್ದೇನೆಂದ ತರೀಕೆರೆಯ ದರ್ಶನ್: ಕುಟುಂಬ ನಿರಾಳ

Update: 2018-07-03 13:06 GMT

ಚಿಕ್ಕಮಗಳೂರು, ಜು.3: ಉತ್ತರ ಭಾರತದ ಮಾನಸ ಸರೋವರ ಯಾತ್ರೆಗೆಂದು ತೆರಳಿದ್ದ ಜಿಲ್ಲೆಯ ತರೀಕೆರೆ ತಾಲೂಕಿನ ಬುಕ್ಕಾಂಬುದಿ ಗ್ರಾಮದ ದರ್ಶನ್ ಎಂಬವರು ಕಳೆದ ಎರಡು ದಿನಗಳಿಂದ ಕುಟುಂಬದವರ ಸಂಪರ್ಕಕ್ಕೆ ಸಿಗದಿದ್ದ ಪರಿಣಾಮ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದು, ಮಂಗಳವಾರ ಸಂಜೆ ದರ್ಶನ್ ತಮ್ಮ ಪೋಷಕರಿಗೆ ದೂರವಾಣಿ ಕರೆ ಮಾಡಿ ತಾನು ಟಿಬೆಟ್‍ನಲ್ಲಿ ಸುರಕ್ಷಿತವಾಗಿದ್ದೇನೆಂದು ತಿಳಿಸಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ. 

ದರ್ಶನ್(28) ತರೀಕೆರೆ ತಾಲೂಕಿನ ಬುಕ್ಕಾಂಬುದಿ ಗ್ರಾಮದ ನಂಜುಂಡಸ್ವಾಮಿ ಪುತ್ರರಾಗಿದ್ದು, ಕಳೆದ 7-8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪೌರೋಹಿತ್ಯ ಮಾಡಿಕೊಂಡಿದ್ದ ದರ್ಶನ್, ಜೂ.21 ರಂದು ಮಾನಸ ಸರೋವರ ಪ್ಯಾಕೇಜ್ ಟೂರ್ ನಲ್ಲಿ ಯಾತ್ರೆಗೆ ತೆರಳಿದ್ದರು ತಿಳಿದು ಬಂದಿದೆ.

ಆತಂಕಕ್ಕೆ ಒಳಗಾಗಿದ್ದ ಕುಟುಂಬ: ದರ್ಶನ್ ಜೂ.21ರಂದು ಮಾನಸ ಸರೋವರ ಯಾತ್ರೆಗೆಂದು ಪ್ಯಾಕೇಜ್ ಟೂರ್ ನಲ್ಲಿ ತೆರಳಿದ್ದು, ಕಳೆದೆರೆಡು ದಿನಗಳಿಂದ ಕುಟುಂಬದವರ ಸಂಪರ್ಕಕ್ಕೆ ಸಿಗದಿರುವುದರಿಂದ ಕುಟುಂಬ ಆತಂಕಕ್ಕೆ ಒಳಗಾಗಿತ್ತು. ರವಿವಾರ ತನ್ನ ಸಹೋದರ ಪ್ರಶಾಂತ್‍ಗೆ ದೂರವಾಣಿ ಕರೆ ಮಾಡಿದಾಗ 'ಶ್ರೀನಗರ, ಲಡಾಕ್ ಹಾಗೂ ಕೈಲಾಶ ಪರ್ವತಗಳನ್ನು ವೀಕ್ಷಿಸಲಾಯಿತು. ನಾಳೆ ಮಾನಸ ಸರೋವರಕ್ಕೆ ತೆರಳುವುದಾಗಿ ತಿಳಿಸಿದ್ದರು. ಅದಾದ ನಂತರ ಮನೆಯವರ ಸಂಪರ್ಕಕ್ಕೆ ದರ್ಶನ್ ಸಿಕ್ಕಿರಲಿಲ್ಲ ಎಂದು ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ದರ್ಶನ್ ಅಣ್ಣ ಪ್ರಶಾಂತ್ ಮಾತನಾಡಿ, ಜೂ.21ರಂದು ಅಣ್ಣ ಸ್ನೇಹಿತರೊಂದಿಗೆ ಅಮರನಾಥ್ ಯಾತ್ರೆಗೆ ಹೋಗಿದ್ದರು. ರವಿವಾರ ಸಂಜೆ ಮನೆಗೆ ಫೋನ್ ಮಾಡಿದಾಗ ಅಲ್ಲಿ ತುಂಬಾ ಮಳೆ ಇದೆ.  ಕೈಲಾಸ ಮುಗಿಸಿ ಅಮರನಾಥ್ ಬೆಟ್ಟ ಹತ್ತುತ್ತಿದ್ದೇನೆಂದು ಹೇಳಿದ್ದ, ನಂತರ ಎಷ್ಟೇ ಪೋನ್ ಮಾಡಿದರೂ ದರ್ಶನ್ ಸಂಪರ್ಕಕ್ಕೆ ಸಿಗುತ್ತಿಲ್ಲರಲಿಲ್ಲ. ದರ್ಶನ್ ದೂರವಾಣಿ ಸಂಪರ್ಕಕ್ಕೆ ಸಿಗದಿರುವುದರಿಂದ ಆತಂಕ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

'ಅಮರನಾಥ ಯಾತ್ರೆಗೆ ತೆರಳಿದ್ದ ದರ್ಶನ್‍ರವರು ಮಂಗಳವಾರ ಸಂಜೆ ತಮ್ಮ ತಂದೆ ತಾಯಿಗೆ ದೂರವಾಣಿ ಕರೆ ಮಾಡಿ ಟಿಬೆಟ್‍ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ' ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News