ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಿ ಆತ್ಮಹತ್ಯೆಗೆ ಶರಣಾದ ಯುವಕ

Update: 2018-07-03 13:21 GMT

ದಾವಣಗೆರೆ,ಜು.03: ಪದವೀಧರನಾದರೂ ಉದ್ಯೋಗ ಸಿಗಲಿಲ್ಲವೆಂದು ಮನನೊಂದ ಯುವಕನೊಬ್ಬ ತನ್ನ ಹೊಲದಲ್ಲಿ ಸಿಎಂ ಹೆಸರಿಗೆ 30 ಸೆಕೆಂಡ್‍ಗಳ ವಾಟ್ಸಪ್ ಸಂದೇಶ ಕಳಿಸಿ, ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾದ ಘಟನೆ ಚನ್ನಗಿರಿ ತಾಲೂಕಿನ ಹೊಸ ನಗರದಲ್ಲಿ ಮಂಗಳವಾರ ನಡೆದಿದೆ.

ಚನ್ನಗಿರಿ ತಾಲೂಕಿನ ಹೊಸ ನಗರದ ಗ್ರಾಮದ ಬಿಎ ಪದವೀಧರ ಬಿ. ಅನಿಲ್ (21) ನೇಣಿಗೆ ಶರಣಾದ ಯುವಕ. ಗ್ರಾಮದ ಬಾಬು ನಾಯ್ಕ, ಗೀತಾಬಾಯಿ ದಂಪತಿಯ ಮೂವರು ಪುತ್ರರಲ್ಲಿ ಕಿರಿಯವನಾದ ಅನಿಲ್ ಉದ್ಯೋಗ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆಂದು ಜು. 4ರಂದು ಅನಿಲ್ ಧಾರವಾಡಕ್ಕೆ ಹೋಗಬೇಕಿತ್ತು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೌಕರಿ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಆತನಿಗೆ ಮನೆಯ ಬಡತನವು ತೀವ್ರವಾಗಿ ಬಾಧಿಸುತ್ತಿತ್ತು. ಇದರಿಂದ ತೀವ್ರ ನೊಂದಿದ್ದ ಅನಿಲ್, ಬೆಳಿಗ್ಗೆ ತಮ್ಮ ಹೊಲಕ್ಕೆ ಹೋಗುವುದಾಗಿ ಹೇಳಿ, ಊರ ಹೊರಗಿನ ಹೊಲಕ್ಕೆ ತೆರಳಿದ್ದಾನೆ. ಮರವೊಂದರ ಕೆಳಗೆ 30 ಸೆಕೆಂಡ್ ಅವಧಿಯ ಧ್ವನಿ ಸಮೇತ ವೀಡಿಯೋವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರಿನಲ್ಲಿ ರೆಕಾರ್ಡ್ ಮಾಡಿ, 'ಉದ್ಯೋಗ ಸಮಸ್ಯೆ ನಿವಾರಿಸಿ, ಬಡ, ಗ್ರಾಮೀಣ, ಪದವೀಧರರ ಸಮಸ್ಯೆಗೆ ಮುಕ್ತಿ ಹಾಡಬೇಕು. ತನ್ನ ಮನವಿಗೆ ಸ್ಪಂದಿಸಬೇಕು' ಎಂದು ತನ್ನ 30 ಸೆಕೆಂಡ್‍ಗಳ ಅಂತಿಮ ಕ್ಷಣಗಳ ವೀಡಿಯೋದಲ್ಲಿ ಮನವಿ ಮಾಡಿ, ಸ್ನೇಹಿತರಿಗೆ, ಬಂಧುಗಳಿಗೆ ವಾಟ್ಸಪ್ ಮಾಡಿದ್ದಾನೆ.

ನಂತರ ಅಲ್ಲಿಯೇ ಕುಳಿತು ಬರೆದ ಒಂದು ಪುಟದ ಮರಣ ಪೂರ್ವ ಪತ್ರದಲ್ಲೂ ಕೇಂದ್ರ-ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿಸುತ್ತಿಲ್ಲ. ಪರಿಣಾಮ ಗ್ರಾಮೀಣ ವಿದ್ಯಾರ್ಥಿ, ಯುವ ಜನರು, ಪದವೀಧರರು, ರೈತರು, ಬಡವರ ಮಕ್ಕಳು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ ಎಂದು ತನ್ನ ಬೇಸರ ಹೊರ ಹಾಕಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News