ಹೆಸರಿಗಷ್ಟೇ ಇಂಧನ ಖಾತೆ ಸಿಎಂ ಕೈಯಲ್ಲಿ.. ಪವರ್ ಇರುವುದೆಲ್ಲಾ ಡಿಕೆಶಿ ಕೈಯಲ್ಲಿ : ಸ್ಪೀಕರ್ ರಮೇಶ್ ಕುಮಾರ್

Update: 2018-07-04 13:19 GMT

ಬೆಂಗಳೂರು, ಜು. 4: ‘ಸಚಿವರಾದ ಝಮೀರ್ ಅಹ್ಮದ್ ಖಾನ್ ಮತ್ತು ಯು.ಟಿ.ಖಾದರ್ ಅವರನ್ನು ನೋಡಬೇಕೆಂದು ನನಗೆ ಬಹಳ ಆಸೆಯಾಗ್ತಿದೆ. ಅವರೆಲ್ಲಿದ್ದಾರೆ, ದಯವಿಟ್ಟು ಕರೆಸಿ’ ಎಂದು ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ಸರಕಾರದ ವಿರುದ್ಧ ಚಾಟಿ ಬೀಸಿದರು.

ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಕಲಾಪದಲ್ಲಿ ಇರಬೇಕಾದ ಈ ಇಬ್ಬರು ಸಚಿವರು ಇನ್ನೂ ಬಂದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್ ಕುರಿತು ಅವರನ್ನು ಕೂಡಲೇ ಕರೆಸಿ ಎಂದು ನಿರ್ದೇಶನ ನೀಡಿದರು.

ಕರೆಂಟ್ ಬಂತು: ಅದೇ ಸಮಯಕ್ಕೆ ಸರಿಯಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸದನಕ್ಕೆ ಆಗಮಿಸಿದರು. ತಡವಾಗಿಯಾದರೂ ಸದನಕ್ಕೆ ಆಗಮಿಸಿದ ಶಿವಕುಮಾರ್ ಅವರಿಗೆ ಸ್ವಾಗತ. ಈಗ ಕಲಾಪಕ್ಕೆ ‘ಕರೆಂಟ್ ಬಂತು’ ಎಂದು ಚಟಾಕಿ ಹಾರಿಸಿದರು.

ಇಂಧನ ಖಾತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಇದ್ದರೂ, ಅವರು ಹೆಸರಿಗಷ್ಟೇ. ಆದರೆ, ಸರಕಾರದ ಪವರ್ ಇರುವುದು ಡಿ.ಕೆ.ಶಿವಕುಮಾರ್ ಅವರ ಬಳಿಯೇ ಎಂದು ರಮೇಶ್ ಕುಮಾರ್ ಹೇಳಿದ್ದರಿಂದ ಸದನದಲ್ಲಿ ನಗೆಯ ಅಲೆ ಉಕ್ಕಿತು.

ವಾಸ್ತು ಪ್ರಕಾರ: ಇದೇ ವೇಳೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಮ್ಮ ಆಸನ ಬಿಟ್ಟು ಹಿಂದಿನ ಸಾಲಿನಲ್ಲಿ ಕೂತು ಸಚಿವ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ರೇವಣ್ಣನವರೇ ನಿಮ್ಮ ಆಸನಕ್ಕೆ ಬನ್ನಿ ಎಂದು ರಮೇಶ್‌ಕುಮಾರ್ ಆಹ್ವಾನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಮುಂದಿನ ಸೀಟುಗಳನ್ನು ಹಿರಿಯರಿಗೆ ಬಿಟ್ಟಿದ್ದೇನೆ. ಹೀಗಾಗಿ ಇಲ್ಲಿ ಕುಳಿತಿದ್ದೇನೆ ಎಂದರು. ‘ನೀವು ಮುಂದಿನ ಸಾಲಿನಲ್ಲಿ ಕುಳಿತರೇ ಲಕ್ಷಣ. ಬನ್ನಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಿ. ಅಲ್ಲದೆ, ಮುಂದಿನ ಸೀಟು ವಾಸ್ತು ಪ್ರಕಾರವೂ ಇದೆ’ ಎಂದು ಹೇಳಿ ಸದನದಲ್ಲಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News