ನನ್ನನ್ನು ಸಿಎಂ ಮಾಡಲು ರಾಜ್ಯಪಾಲರು ಕರೆಯಬೇಕಿತ್ತು !

Update: 2018-07-04 16:41 GMT

ಬೆಂಗಳೂರು, ಜು.4: 'ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಮುಖ್ಯಮಂತ್ರಿ ಮಾಡಲು ರಾಜ್ಯಪಾಲರು ಕರೆಯಬೇಕಿತ್ತು. ಆದರೆ ಕರೆದಿಲ್ಲ. ಹೀಗಾಗಿ, ರಾಜ್ಯಪಾಲರು ಈ ಕುರಿತು ಕೋರ್ಟ್ ವಿವರಣೆ ಪಡೆದು ನನಗೆ ನ್ಯಾಯ ಒದಗಿಸಬೇಕು'. ಹೀಗೆಂದು ತೀರ್ಥಹಳ್ಳಿಯ 66 ವರ್ಷದ ಟಿ.ಡಿ.ಆರ್.ಹರಿಶ್ಚಂದ್ರ ಗೌಡ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

ಈ ಅರ್ಜಿ ಬುಧವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ವಿಚಾರಣೆ ವೇಳೆ ಅರ್ಜಿದಾರ ಹರಿಶ್ಚಂದ್ರಗೌಡ ಸ್ವತಃ ಕನ್ನಡದಲ್ಲಿ ವಾದ ಮಂಡಿಸಲು ಮುಂದಾದರು. ಆಗ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನು ತಡೆದು, ನೀವು ಕನ್ನಡದಲ್ಲೇ ವಾದ ಮಾಡುವುದಾದರೆ ಈ ಪ್ರಕರಣವನ್ನು ಬೇರೊಂದು ನ್ಯಾಯಪೀಠಕ್ಕೆ ವರ್ಗಾಯಿಸಲಾಗುವುದು. ಯಾಕೆಂದರೆ ಮುಖ್ಯ ನ್ಯಾಯಮೂರ್ತಿಗಳಿಗೆ ಕನ್ನಡ ಬರುವುದಿಲ್ಲ ಎಂದು ವಿವರಿಸಿದರು. ಇದಕ್ಕೆ ಹರಿಶ್ಚಂದ್ರಗೌಡ 'ಆಗಲಿ ಮೈ ಲಾರ್ಡ್‌ಶಿಪ್, ಧನ್ಯವಾದಗಳು' ಎಂದು ಎರಡೂ ಕೈಯೆತ್ತಿ ನ್ಯಾಯಪೀಠ್ಕಕೆ ನಮಸ್ಕರಿಸಿ ಕೋರ್ಟ್ ಹಾಲ್‌ನಿಂದ ಹೊರನಡೆದರು.

ಅರ್ಜಿಯಲ್ಲಿ ಏನಿದೆ: ನಾನು ತುಳಿತಕ್ಕೊಳಗಾದವರು ಹಾಗೂ ಬಡವರ ಪರ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ. ಎಐಸಿಸಿ ಸದಸ್ಯನೂ ಹೌದು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಧನಾನಂತರ 42 ವರ್ಷಗಳಿಂದೀಚೆಗೆ ನಾನೊಬ್ಬನೇ ನೆಹರೂ ಕುಟುಂಬದ ಏಕೈಕ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ದಲಿತರ ಮೀಸಲು ಸೌಲಭ್ಯವನ್ನು 10 ವರ್ಷ ಮುಂದುವರಿಸುವಂತೆ 1980ರಲ್ಲಿ ಸಂಜಯ ಗಾಂಧಿಗೆ ಹಾಗೂ 1990ರಲ್ಲಿ ವಿ.ಪಿ.ಸಿಂಗ್ ಅವರಿಗೆ ಸಲಹೆ ಕೊಟ್ಟವನೇ ನಾನು. ಇದನ್ನು ಅವರಿಬ್ಬರೂ ಒಪ್ಪಿ 20 ವರ್ಷ ಮೀಸಲು ಅವಧಿ ವಿಸ್ತರಿಸಿದರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಪ್ರಾಣವನ್ನು ನಾಲ್ಕು ಬಾರಿ ಉಳಿಸಿದ್ದೇನೆ.

1980ರಲ್ಲಿ ಸಂಜಯ ಗಾಂಧಿ 1981ರಲ್ಲಿ ಇಂದಿರಾ ಗಾಂಧಿ, 1992ರಲ್ಲಿ ಪಿ.ವಿ.ನರಸಿಂಹ ರಾವ್, 2002ರಲ್ಲಿ ಸೋನಿಯಾ ಗಾಂಧಿ ನನ್ನನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದ್ದರು. ದೇವೇಗೌಡರು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾನೇ ಕಾರಣ. ಯಡಿಯೂರಪ್ಪ ಅವರಿಗೆ ಬಹುಮತ ಇಲ್ಲದ ಕಾರಣ ಹರಿಶ್ಚಂದ್ರ ಮುಖ್ಯಮಂತ್ರಿಯಾಗುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ್ ಹಾಗೂ ಜೆಡಿಎಸ್‌ನ ದೇವೇಗೌಡರೂ ನನಗೆ ಸರಕಾರ ರಚಿಸಲು ಬೆಂಬಲ ಸೂಚಿಸಿದ್ದರು. ಮೊನ್ನೆಯ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲಿಲ್ಲ. ಹೀಗಾಗಿ ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಕರೆಯಬೇಕಿತ್ತು. ಕಾಂಗ್ರೆಸ್ ನನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿತ್ತು. ಹೀಗಾಗಿ ನಾನು ರಾಜ್ಯಪಾಲರಿಗೆ ಮನವಿ ನೀಡಿದ್ದೆ. ಆದರೆ, ಅವರು ಅದನ್ನು ಪರಿಗಣಿಸಿಲ್ಲ ಎಂಬುದು ಅರ್ಜಿದಾರರ ಆಕ್ಷೇಪ.

ಈ ಪ್ರಕರಣ ಇದೇ 6ರಂದು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News