ಸಂಗಾತಿ ಕೊಡುವ ಭರವಸೆ

Update: 2018-07-04 18:36 GMT

 ರಾಜ್ಯ ಮಹಿಳಾ ವಿವಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಡಾ. ಆರ್. ಸುನಂದಮ್ಮ ಅವರ ಹೆಣ್ಣು ಕಣ್ಣೋಟದ ವಿಮರ್ಶಾ ಲೇಖನಗಳೇ ‘ಸಂಗಾತಿ ರೂವ್ವ ಬರಸೇನಾ’. ಇದು ಇವರ ದ್ವಿತೀಯ ವಿಮರ್ಶಾ ಕೃತಿಯಾಗಿದೆ. ಇಲ್ಲಿರುವ 18 ಪ್ರಬಂಧಗಳನ್ನು ಎರಡು ಭಾಗಗಳಾಗಿ ಮಾಡಲಾಗಿದೆ. ಮೊದಲನೆಯ ಗುಂಪು ಮಹಿಳೆಯ ಬದುಕಿನ ಬಹುಮುಖಿ ನೆಲೆಗಳನ್ನು ರೂಪಿಸಿದ, ಪ್ರಭಾವಿಸಿದ, ನಿಯಂತ್ರಿಸಿದ ಹಾಗೂ ನಿರ್ದೇಶಿಸಿದ ಸಮಾಜದ ವಿವಿಧ ಶಕ್ತಿಕೇಂದ್ರಗಳ ಉದ್ದೇಶ ಮತ್ತು ತಾತ್ವಿಕತೆಯ ಚರ್ಚೆಗೆ ಮೀಸಲಾದ ಲೇಖನಗಳಾಗಿವೆ. ಎರಡನೆಯದು ಜನಪದ ಕಾವ್ಯ, ನಡುಗನ್ನಡದ ಸಾಹಿತ್ಯವನ್ನು ಸ್ತ್ರೀವಾದಿ ನೆಲೆಯಿಂದ ವಿಶ್ಲೆೀಷಿಸುವ ಲೇಖನಗಳಿಗೆ ಮೀಸಲಾಗಿದೆ.

‘ಸಂಗಾತಿ ರೂವ್ವ ಬರಸೇನಾ’ ಎನ್ನುವ ಹೆಸರೇ ಕುತೂಹಲಕರವಾಗಿದೆ. ಈ ಪದ ಜನಪದ ಕಾವ್ಯ ಉತ್ತರಾದೇವಿ ಪಠ್ಯದಲ್ಲಿ ಬರುವ ಸಾಲು. ಗಂಡನ ಮನೆಯಿಂದ ತಿರಸ್ಕೃತಳಾಗಿ ತವರಿಗೆ ಬಂದು ಅಲ್ಲಿಯೂ ಯಾರೂ ಅವಳನ್ನು ಮನೆಗೆ ಸೇರಿಸದಾದಾಗ ಆಕೆ ಗೆಳತಿಯ ಮನೆಗೆ ಬರುತ್ತಾಳೆ. ಕರುಳು, ರಕ್ತ ಸಂಬಂಧಗಳು ತಿರಸ್ಕರಿಸಿದರೂ ಗೆಳತಿ ಆಕೆಯನ್ನು ಸ್ವಾಗತಿಸುತ್ತಾಳೆ. ಉತ್ತರಾದೇವಿ ಯನ್ನು ಸ್ವಾಗತಿಸುತ್ತಾ ‘‘ಸಂಗಾತಿ ಬಾರೇ ಸಾಧು ಮಣಿಯೇ ಬಾರೆ, ಸಂಗಾತಿ ಸೋತರೆ ಅಂಗೈಯಲ್ಲಿ ಮಡಿಗೇನು ಜಂಬು ನೇರಳೆ ತಿನಿಸೇನು ಸಂಗಾತಿ ನಿನ್ನ ರೂವ್ವ ಬರೆಸೇನು’ ಎಂದು ಭರವಸೆ ನೀಡುತ್ತಾಳೆ. ಆ ಭರವಸೆ ಹೆಣ್ಣು ಸಕಲ ಸ್ತ್ರೀಕುಲಕ್ಕೆ ನೀಡುವ ಭರವಸೆಯಾಗಿ, ಪದವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.
ಮಹಿಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿದ್ದಾಳೆ. ಮತ್ತು ಅವಳು ನೋಡುವ ಸಮಾಜ ಮತ್ತು ಅವಳನ್ನು ನೋಡುವ ಸಮಾಜ ಎರಡನ್ನೂ ಈ ಕೃತಿಯಲ್ಲಿ ಮುಖಾಮುಖಿ ಗೊಳಿಸಲಾಗಿದೆ. ಹೇಗೆ ನಂಬಿಕೆಗಳು ನಿಧಾನಕ್ಕೆ ಮಹಿಳೆಯ ಶೋಷಣೆಗಳಿಗೆ ಬಳಕೆಯಾಗತೊಡಗಿತು ಎನ್ನುವುದನ್ನು ಜಾಗತಿಕ ಆಚಾರ, ವಿಚಾರಗಳನ್ನಿಟ್ಟುಕೊಂಡು ಅವರು ವಿಶ್ಲೇಷಿಸುತ್ತಾರೆ. ಸ್ತ್ರೀವಾದಕ್ಕೆ ಶಕ್ತಿ ದೇವತೆಯ ಕೊಡುಗೆ, ಆಹಾರ, ಮನೆಮದ್ದು ಎಂಬ ಮಹಿಳೆಯ ಲೋಕ, ಕೈಗಾರಿಕೀರಣದಿಂದ ಮಹಿಳೆಯ ಮೇಲೆ ಆದ ಪರಿಣಾಮ, ಅಭಿವೃದ್ಧಿ ಮತ್ತು ಮಹಿಳಾ ದೌರ್ಜನ್ಯಗಳ ನಡುವಿರುವ ಕೊಂಡಿ, ಕೌಟುಂಬಿಕ ಹಿಂಸೆ, ದುಡಿಯುವ ಮಹಿಳೆ ಮತ್ತು ಸಾಂಪ್ರದಾಯಿಕತೆ ಇವುಗಳನ್ನು ಮೊದ ಅಧ್ಯಾಯದಲಿ್ಲ ಚರ್ಚಿಸಲಾಗಿದೆ.
ಎರಡನೆ ಅಧ್ಯಾಯದಲ್ಲಿ ಸಾಹಿತ್ಯದ ಮೂಲಕ ಹೊರಹೊಮ್ಮಿದ ಮಹಿಳೆ ಯನ್ನು ಕಟ್ಟಿಕೊಡಲು ಯತ್ನಿಸುತ್ತಾರೆ. ಸ್ತ್ರೀ ಕೇಂದ್ರಿತ ಕಾವ್ಯಗಳಾಗಿ ಜನಪದ ರಾಮಾಯಣ ಮತ್ತು ಮಹಾಭಾರತ, ಹಾಲುಮತ ಪುರಾಣ ಕಾವ್ಯದಲ್ಲಿ ಮಹಿಳೆಯ ಅಭಿವ್ಯಕ್ತಿ, ವೌಖಿಕ ಸಾಹಿತ್ಯದಲ್ಲಿ ಲಿಂಗ ಸಮಾನತೆಯ ಸ್ವರೂಪ, ಹೊನ್ನಮ್ಮನ ಹದಿಬದೆಯ ಧರ್ಮದ ವಿಶ್ಲೇಷಣೆ ಹೀಗೆ ಪುರಾಣ, ಇತಿಹಾಸ ಮತ್ತು ವರ್ತಮಾನದ ಸಾಹಿತ್ಯಾಭಿವ್ಯಕ್ತಿಗಳಲ್ಲಿ ಮಹಿಳೆಯ ಸ್ವರೂಪ ವನ್ನು, ಅಸ್ಮಿತೆಯನ್ನು ಹುಡುಕಾಡುತ್ತಾರೆ. ಲೇಖಕಿಯೇ ಹೇಳಿಕೊಳ್ಳುವಂತೆ ಇಲ್ಲಿರುವ ಎಲ್ಲ ಬರಹಗಳೂ ಹೆಣ್ಣಿನ ಕಣೆ್ಣಿಟದಿಂದಲೇ ಮೈದಳೆದವುಗಳು.
ಕವಿ ಪ್ರಕಾಶನ ಕವಲಕ್ಕಿ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 300. ಮುಖಬೆಲೆ 180 ರೂಪಾಯಿ. ಆಸಕ್ತರು 94802 11320 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News