ಮತೀಯ ದ್ವೇಷ ಮೂಡಿಸಲು ಯತ್ನಿಸಿದ ಆರೋಪ: ಕೇರಳದ ಸುದ್ದಿ ನಿರೂಪಕನ ವಿರುದ್ಧ ಪ್ರಕರಣ

Update: 2018-07-06 10:54 GMT

ತಿರುವನಂತಪುರಂ, ಜು.6: 'ಪ್ರೈಮ್ ಟೈಮ್' ಚರ್ಚಾ ಕಾರ್ಯಕ್ರಮದಲ್ಲಿ ಮತೀಯ ದ್ವೇಷ ಮೂಡಿಸಲು ಯತ್ನಿಸಿದ ಆರೋಪದ ಮೇಲೆ ಕೇರಳದ 'ಮಾತೃಭೂಮಿ' ಟಿವಿಯ ನ್ಯೂಸ್ ಆಂಕರ್ ವೇಣು ಬಾಲಕೃಷ್ಣನ್ ವಿರುದ್ಧ ಕೊಲ್ಲಂ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೇಣು ವಿರುದ್ಧ ಸ್ಥಳೀಯ ಡಿವೈಎಫ್‍ಐ ನಾಯಕ ಸಹಿತ ಇಬ್ಬರು ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಜೂನ್ 7ರಂದು 'ಪೊಲೀಸ್ ದೌರ್ಜನ್ಯ'ದ ಬಗೆಗಿನ ಚರ್ಚಾ ಕಾರ್ಯಕ್ರಮವೊಂದರಲ್ಲಿ ವೇಣು ಅವರು ಎರ್ಣಾಕುಳಂನ ಆಲುವ ಎಂಬಲ್ಲಿ ಯುವಕ ಇದಾದತುಲ್ ಉಸ್ಮಾನ್ ಎಂಬ ಮುಸ್ಲಿಂ ಯುವಕನ ಮೇಲೆ ನಡೆದಿತ್ತೆನ್ನಲಾದ ದೌರ್ಜನ್ಯವನ್ನು ಉಲ್ಲೇಖಿಸಿ ``ಮುಸ್ಲಿಂ ಸೋದರರೇ ನೀವು ರಮಝಾನ್ ಉಪವಾಸವನ್ನು ನಿಮ್ಮ ಉಗುಳು ಕೂಡ ನುಂಗದೆ ಆಚರಿಸುತ್ತೀರಿ. ಮುಖ್ಯಮಂತ್ರಿ ಇಂತಹ ಒಂದು ಕಳಂಕದಿಂದ ನಿಮಗೆ ಅವಮಾನವುಂಟು ಮಾಡಿದ್ದಾರೆ. ಉಪವಾಸ ತೊರೆಯಲು ಹೋದಾತನಿಗೆ ಜೈಲು ಶಿಕ್ಷೆ ನೀಡಲಾದ ರಾಜ್ಯವಿದು'' ಎಂದಿದ್ದರು ಎಂದು ಆರೋಪಿಸಲಾಗಿದೆ.

ಆದರೆ ಉಸ್ಮಾನ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಹಾಗು ಅಬ್ದುನ್ನಾಸರ್ ಮಅದನಿಯ ನ್ಯಾಯಾಂಗ ಬಂಧನ ವಿರೋಧಿಸಿ  ಕೊಚ್ಚಿಯಲ್ಲಿ 2005ರಲ್ಲಿ ತಮಿಳುನಾಡಿನ ಬಸ್ಸೊಂದನ್ನು ಹೊತ್ತಿ ಉರಿಸಿದ ಪ್ರಕರಣದಲ್ಲಿ ಆತ ಶಾಮೀಲಾಗಿದ್ದನೆಂದು ಮುಖ್ಯಮಂತ್ರಿ ಹೇಳಿರುವುದನ್ನು ಉಲ್ಲೇಖಿಸಿ ವೇಣು ಮೇಲಿನಂತೆ ಹೇಳಿದ್ದರು ಎನ್ನಲಾಗಿದೆ.

ವೇಣು ವಿರುದ್ಧದ ಸೆಕ್ಷನ್ 153ಎ ಅನ್ವಯ ಪ್ರಕರಣವನ್ನು ಪ್ರಾಸಿಕ್ಯೂಶನ್ ಮಹಾನಿರ್ದೇಶಕರಿಂದ ಕಾನೂನು ಸಲಹೆ ಪಡೆದು ದಾಖಲಿಸಿದ್ದಾಗಿ ಕೊಲ್ಲಂ ನಗರ ಪೊಲೀಸ್ ಆಯುಕ್ತ ಅರುಲ್ ಬಿ ಕೃಷ್ಣ ಹೇಳಿದ್ದಾರೆ.

"ವೇಣು ವಿರುದ್ಧದ ಪ್ರಕರಣ ಮಾಧ್ಯಮ ಸ್ವಾತಂತ್ರ್ಯಕ್ಕೆ ಒಂದು ಸವಾಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಪ್ರಧಾನಿ ನರೇಂದ್ರ ಮೋದಿಯ ಹಾದಿ ತುಳಿಯುತ್ತಿದ್ದಾರೆಂದು ಅದು ತೋರಿಸಿದೆ" ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News