ರಾಮನಗರದಲ್ಲಿ ಹೊಸ ಕಾಲೇಜುಗಳ ಪ್ರಾರಂಭ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-06 14:51 GMT

ಬೆಂಗಳೂರು, ಜು. 6: ರಾಮನಗರ ಜಿಲ್ಲೆಯಲ್ಲಿ ವಸತಿ ಸಹಿತ ಪದವಿ ಕಾಲೇಜನ್ನು ಪ್ರಾರಂಭಿಸಲು ಜಿಲ್ಲೆಯ ಆನಮಾನಹಳ್ಳಿ, ಹರಿಸಂದ್ರ ಹಾಗೂ ಅಚ್ಚಲು ಗ್ರಾಮದಲ್ಲಿ 7 ಎಕರೆ ವಿಸ್ತೀರ್ಣದ ಗುರುತಿಸಲಾಗಿರುವ ಸ್ಥಳ ಪರಿವೀಕ್ಷಿಸಿದ ನಂತರ ಈ ಬಗ್ಗೆ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ರಾಮನಗರ ಜಿಲ್ಲೆಯಲ್ಲಿ ಹೊಸ ಕಾಲೇಜುಗಳ ಸ್ಥಾಪನೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡ, ಶೌಚಾಲಯ ಸೇರಿ ಇನ್ನಿತರ ಮೂಲಭೂತ ಸೌಲಭ್ಯಗಳಿದ್ದಲ್ಲಿ ಮಾತ್ರ ಸರಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬಹುದು. ಅಲ್ಲದೆ, ಕಟ್ಟಡಗಳ ನಿರ್ವಹಣೆಗೂ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಬಿ.ಕಾಂ. ಜೊತೆಗೆ ವೃತ್ತಿಪರ ಕೋರ್ಸುಗಳ ಸಂಯೋಜನೆವುಳ್ಳ ಕೋರ್ಸುಗಳನ್ನು ಹಾಗೂ ಸಿಬಿಝಡ್ ಮತ್ತು ಮೈಕ್ರೋ ಬಯಾಲಜಿ ಕೋರ್ಸುಗಳಿಗೆ ಬೇಡಿಕೆ ಇರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಈ ಕೋರ್ಸುಗಳನ್ನು ಪದವಿ ಕಾಲೇಜುಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕಾಲೇಜುಗಳಲ್ಲಿ ಉತ್ತಮ ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೂಚಿಸಿದರು. ಕಾಲೇಜು ಪ್ರಾರಂಭಿಸಲು ಸ್ಥಳ ನಿಗದಿಯಾದ ನಂತರ ಅನುಮೋದನೆಯಾಗಿ ಅನುದಾನ ಬಿಡುಗಡೆ ಮಾಡಿದ ಕೂಡಲೆ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದು ಎಂದು ಲೋಕೋಪಯೋಗಿ ಸಚಿವ ರೇವಣ್ಣ ತಿಳಿಸಿದರು.

ಉನ್ನತ ಶಿಕ್ಷಣ ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿ ರಾಜ್‌ ಕುಮಾರ್ ಖತ್ರಿ, ಆಯುಕ್ತೆ ಎನ್.ಮಂಜುಳಾ, ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮುಲ್ಲೈ ಮಹಿಲನ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News