‘ಸ್ಥಳೀಯ ಶಾಲೆಗಳೊಂದಿಗೆ ಸರಕಾರಿ ಶಾಲೆಗಳ ವಿಲೀನಕ್ಕೆ ಖಂಡನೆ’

Update: 2018-07-06 16:06 GMT

ಬೆಂಗಳೂರು, ಜು.6: ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಸರಕಾರಿ ಶಾಲೆಗಳನ್ನು ವೀಲಿನ ಮಾಡಲಾಗುತ್ತದೆ ಎಂದು ಪ್ರಸ್ತಾಪಿಸುವ ಮೂಲಕ ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದಾರೆ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ತೌಸಿಫ್ ಮಡಿಕೇರಿ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಬಜೆಟ್‌ನಲ್ಲಿ ಶಾಲೆಗಳ ಸಬಲೀಕರಣಕ್ಕೆ ಅಗತ್ಯವಾದ ಯೋಜನೆಗಳನ್ನು ಘೋಷಣೆ ಮಾಡುವ ಬದಲಿಗೆ, ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಮುಂದಾಗಿದ್ದಾರೆ. ಇದೊಂದು ಖಾಸಗೀಕರಣದ ಹುನ್ನಾರವಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ 28847 ಶಾಲೆಗಳನ್ನು ಹತ್ತಿರದ 8530 ಶಾಲೆಗಳಲ್ಲಿ ವಿಲೀನಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎನ್ನುವುದು ಸಮಂಜಸವಲ್ಲ. ಈಗಾಗಲೇ ರಾಜ್ಯಾದ್ಯಂತ ನಾಯಿಕೊಡೆಯಂತೆ ಖಾಸಗಿ ಶಾಲೆಗಳು ಹಬ್ಬಿಕೊಂಡಿವೆ. ಇದೀಗ ವಿಲೀನದ ಹೆಸರಿನಲ್ಲಿ ಶಾಲೆಗಳಿಗೆ ಬೀಗ ಜಡಿದರೆ ಇನ್ನೂ ಹೆಚ್ಚಿನ ಖಾಸಗಿ ಶಾಲೆಗಳು ಆರಂಭವಾಗುತ್ತವೆ. ಅನಂತರ ಶಿಕ್ಷಣ ಎಂಬುದು ಮಾರಾಟದ ಸರಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಆಯ್ದ ಒಂದು ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸುತ್ತೇವೆ ಎನ್ನುವುದು ಅವೈಜ್ಞಾನಿಕ ಕ್ರಮ. ಈಗಾಗಲೇ ಒಂದನೇ ತರಗತಿಯಿಂದ ಆಂಗ್ಲ ಭಾಷೆಯನ್ನು ಕನ್ನಡದ ಜೊತೆಯಲ್ಲೇ ಓದಿಸಬೇಕೆಂಬ ಆದೇಶವಾಗಿದ್ದರೂ, ಆಂಗ್ಲ ಶಿಕ್ಷಕರ ಕೊರತೆಯಿಂದ ಈಗಲೂ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಆಂಗ್ಲ ಭಾಷೆಯನ್ನು ಬೋಧನೆ ಮಾಡುವ ಸಮರ್ಥ ಶಿಕ್ಷಕರಿಲ್ಲ. ಹೀಗಿರುವಾಗ, ಆಂಗ್ಲ ಭಾಷೆಯಲ್ಲಿ ಎಲ್ಲವನ್ನೂ ಕಲಿಸುತ್ತೇವೆ ಎಂದು ಹೊರಟಿರುವುದು ಮೂರ್ಖತನ ಎಂದು ಅವರು ವಿಷಾದಿಸಿದರು.

ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದ ರಾಜ್ಯ ಸರಕಾರ ಬಜೆಟ್‌ನಲ್ಲಿ ಬಸ್‌ಪಾಸಿಗೆ ಹಣ ಮೀಸಲಿಡದೆ ವಿದ್ಯಾರ್ಥಿಗಳಿಗೆ ವಂಚಿಸಿದೆ. ಬಜೆಟ್‌ನ ಶೇ.15ರಷ್ಟು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕಾಗಿದ್ದ ಸರಕಾರ ಕಡಿತಗೊಳಿಸಿ ಕೇವಲ ಶೇ.11ರಷ್ಟು ಮೀಸಲಿಟ್ಟಿರುವುದು ಖಂಡನೀಯ.
ಅಲ್ಲದೆ, ಸರಕಾರಿ ಶಾಲೆಗಳ ಸಬಲೀಕರಣ ಮಾಡಿ ಶಾಲೆಗಳನ್ನು ಉಳಿಸಿಕೊಳ್ಳುವ ಸರಕಾರ ಸರಕಾರಿ ಶಾಲಾ ಸಬಲೀಕರಣ ವರದಿಯನ್ನು ಅನುಷ್ಠಾನ ಮಾಡಲು ಕ್ರಮ ಕೈಗೊಂಡಿಲ್ಲ. ಹೀಗಾಗಿ, ಕೂಡಲೇ ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಆರ್‌ಟಿಇ ಅಡಿಯಲ್ಲಿ ಶೇ.25ರಷ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ಅವರ ಶುಲ್ಕವನ್ನು ಸರಕಾರ ಭರಿಸುತ್ತಿರುವುದನ್ನು ಸರಕಾರ ನಿಲ್ಲಿಸಬೇಕು. ಕಡಿಮೆ ಹಾಜರಾತಿ ಶಾಲೆಗಳ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಹತ್ತು ವರ್ಷದವರೆಗೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಕಾರ್ಯದರ್ಶಿ ಜೀಶಾನ್ ಅಖಿಲ್ ಸಿದ್ಧಿಖಿ, ರಾಜ್ಯ ಜನ ಸಂಪರ್ಕ ಕಾರ್ಯದರ್ಶಿ ಡಾ.ನಸೀಮ್ ಅಹಮದ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜರುದ್ದೀನ್ ಪಿಲಾಕೊಡನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News