ಚಿಕ್ಕಮಗಳೂರು: ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷೆಯಾಗಿ ಜಸಂತಾ ನೇಮಕ

Update: 2018-07-06 16:23 GMT

ಚಿಕ್ಕಮಗಳೂರು, ಜು.6: ಅಭಿವೃದ್ಧಿ ಕೆಲಸಗಳ ಬಗೆಗೆ ಪಕ್ಷ ಬೇಧ ಮಾಡಬಾರದು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಲ್ಲಾ ಸದಸ್ಯರು ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಕೆಲಸಗಳ ಮೂಲಕ ರಾಜ್ಯದಲ್ಲಿಯೇ ಮಾದರಿ ಜಿಲ್ಲಾ ಪಂಚಾಯತ್ ಮಾಡಬಹುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಜಸಂತಾ ಅನಿಲ್‍ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಹತ್ತಿರ ಆಗಿರುವ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಹೆಚ್ಚು ಗಮನ ಹರಿಸಿ ಕೆಲಸ ಮಾಡಿ ಜನರ ವಿಶ್ವಾಸ ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷೆ ಕವಿತಾ ಲಿಂಗರಾಜು ಮಾತನಾಡಿ, ಮಹಿಳೆಯರು ಪುರುಷರು ಸರಿ ಸಮಾನರಾಗಿ ಎಲ್ಲಾ ಕ್ಷೇತ್ರದಲ್ಲೂ ದುಡಿದು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಯಿಸಬಲ್ಲಳು. ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕು. ಖಾಸಗಿ ಶಾಲೆ ತೆರೆಯಲು ಹೆಚ್ಚು ಅವಕಾಶ ನೀಡದೆ ಸರಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕೆಂದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ ಜಸಂತಾ ಅನಿಲ್‍ ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು. ಯಾವುದೋ ಒತ್ತಡಕ್ಕೆ ಒಳಗಾಗಿ ಖಾಸಗಿ ಶಾಲೆ ಪ್ರಾರಂಭಿಸಲು ಅನುಮತಿ ನೀಡುತ್ತಿರುವುದರ ಬಗ್ಗೆ ಹೆಚ್ಚು ಆರೋಪಗಳು ಕೇಳಿ ಬರುತ್ತಿವೆ. ತಕ್ಷಣವೇ ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ ನಾವು ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ. ಎಲ್ಲಾ ಸದಸ್ಯರ ಸಹಕಾರ ಮತ್ತು ಶಾಸಕರ ಮಾರ್ಗದರ್ಶನದೊಂದಿಗೆ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ರಾಜಕೀಯದ ಗಂಧ, ಗಾಳಿ ಇಲ್ಲದ ನನಗೆ ಶಾಸಕ ಸಿ.ಟಿ.ರವಿ ಮತ್ತು ನಮ್ಮ ಮನೆಯವರ ಸಹಕಾರದೊಂದಿಗೆ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ, ಪ್ರಸಕ್ತ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ಬಿಜೆಪಿ ಪಕ್ಷಕ್ಕೂ ಮತ್ತು ಶಾಸಕರಿಗೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡುತ್ತೇನೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್, ಜಿಪಂ ಸದಸ್ಯರಾದ ಸೋಮಶೇಖರ್, ಬೆಳವಾಡಿ ರವೀಂದ್ರ, ಮಹೇಂದ್ರ, ಸ್ಥಾಯಿ ಸಮಿತಿಯ ಸದಸ್ಯರಾದ ರಾಮಸ್ವಾಮಿ, ಕಾವೇರಿ ಲಕ್ಕಪ್ಪ, ಶಶಿಕಲಾ ಅವಿನಾಶ್, ನಿಖಿಲ್ ಚಕ್ರವರ್ತಿ, ಸದಾಶಿವ, ವನಮಾಲದೇವರಾಜ್, ತಾಪಂ ಅಧ್ಯಕ್ಷ ಜಯ್ಯಣ್ಣ, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಉಪಾಧ್ಯಕ್ಷ ಸುಧೀರ್, ಎಪಿಎಂಸಿ ಅಧ್ಯಕ್ಷ ಬಸವರಾಜ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News