ನನ್ನ ಮಗನದ್ದು ಪ್ರೇಮ ಪ್ರಕರಣದ ಕೊಲೆಯಲ್ಲ, ಹಣಕ್ಕಾಗಿ ನಡೆದ ಕೊಲೆ: ಮೃತ ರೋಹನ್ ತಾಯಿ

Update: 2018-07-06 16:39 GMT

ಬೀರೂರು, ಜು.6: ಒಬ್ಬ ಮಗ ಹೋದರೇನಂತೆ ನಾವೆಲ್ಲ ನಿನ್ನ ಮಕ್ಕಳೆ, ನಿಮ್ಮ ಯಾವುದೇ ಸಮಸ್ಯೆ, ತೊಂದರೆಗಳಿಗೆ ನಾವು ಮತ್ತು ನಮ್ಮ ಇಲಾಖೆ ನಿಮ್ಮ ಬೆಂಬಲಕ್ಕೆ ಇದ್ದೇವೆ, ಇದು ಎಸ್ಪಿ ಅಣ್ಣಾಮಲೈ ಮೃತ ರೋಹನ್ ತಾಯಿಗೆ ಹೇಳಿದ ಸಾಂತ್ವನದ ಮಾತುಗಳು.

ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ‘ನನ್ನ ಮಗನದ್ದು ಪ್ರೇಮ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ನಡೆದ ಕೊಲೆಯಲ್ಲ, ಇದು ದುಡ್ಡಿನ ದುರಾಸೆಯಿಂದ ನಡೆಸಲಾಗಿರುವ ಅಮಾನವೀಯ ಕೃತ್ಯ’ ಎಂದು ಕೊಲೆಯಾದ ರೋಹನ್‌ನ ತಾಯಿ ಕಾತ್ಯಾಯಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗ ವಿದ್ಯಾಭ್ಯಾಸದಲ್ಲಿ ಮುಂದಿದ್ದನೇ ಹೊರತು ಹುಡುಗಿಯರ ಶೋಕಿ ಇರಲಿಲ್ಲ. ಅವನು ಎಸೆಸೆಲ್ಸಿ ಪರೀಕ್ಷೆಗಳಲ್ಲಿ ಶೇ.93 ಅಂಕಗಳಿಸಿ ಕಡೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಪ್ರೇಮ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವನು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿರಲಿಲ್ಲ. ಕೃತ್ಯ ನಡೆಸಿದವರು ರಾಜಕೀಯ ಹಿನ್ನೆಲೆ ಹೊಂದಿ ಘಟನೆಯ ತೀವ್ರತೆಯನ್ನು ಕಡಿಮೆ ಮಾಡಲು ಗಾಳಿ ಸುದ್ದಿಗಳನ್ನು ತೇಲಿ ಬಿಡಲಾಗಿದೆ. ನನ್ನ ಪತಿ ಇತ್ತೀಚೆಗೆ ನಿಧನರಾಗಿದ್ದು ಅವರ ನೌಕರಿಗೆ ಸಂಬಂಧಿಸಿದ ಹಣ ಬಿಡುಗಡೆ ಆಗಿ ನಮ್ಮ ಬಳಿ ಇರಬಹುದು ಎನ್ನುವ ಶಂಕೆಯಿಂದಲೇ ಈ ಕೃತ್ಯ ಎಸಗಿದ್ದಾರೆ.

ಅವರು ನನ್ನ ಮಗನನ್ನು ಅಪಹರಿಸಿ ಹಣಕ್ಕಾಗಿ ಫೋನ್ ಮಾಡಿದ್ದು ನಿಜ. ಮೊದಲು ರೂ.15ಲಕ್ಷ ರೂ. ಬೇಡಿಕೆ ಇಟ್ಟವರು ಬಳಿಕ 10 ಲಕ್ಷ ರೂ. ಕಡೆಗೆ 4ಲಕ್ಷ ರೂ.ವಾದರೂ ಕೊಡುವಂತೆ ಕೇಳಿದ್ದರು. ನಾನು ಸಮಯ ಕೇಳಿದ್ದಕ್ಕೆ ನಿನ್ನ ಹಣೆಬರಹ ಮುಗೀತು ಎಂದು ಬೆದರಿಸಿ ಫೋನ್ ಕಟ್ ಮಾಡಿದ್ದರು. ನಾನು ತಕ್ಷಣವೇ ಹಣ ಕೊಡಲು ಆಗುವುದಿಲ್ಲ, ಬೇಕಿದ್ದರೆ ಹೇಗಿದೆಯೋ ಹಾಗೆ ಮನೆ ಖಾಲಿ ಮಾಡಿ ನಿಮಗೆ ಬರೆದುಕೊಟ್ಟು ಹೋಗುವುದಾಗಿ ಅಂಗಲಾಚಿದರೂ ಕೇಳದೆ ನನ್ನ ಮಗನ ಜೀವ ತೆಗೆದರು. ಕೆಲ ಪತ್ರಿಕೆಗಳವರೂ ಮೌಖಿಕ ಹೇಳಿಕೆಗಳನ್ನು ಆಧರಿಸಿ ಇದಕ್ಕೆ ಪ್ರೇಮ ಪ್ರಕರಣದ ಬಣ್ಣ ಕಟ್ಟಿದ್ದಾರೆ’ ಎಂದು ದುಃಖಿಸಿದರು.

ಮೃತ ಬಾಲಕನ ತಾಯಿಯ ಬೇಡಿಕೆಯಂತೆ ಗುರುವಾರ ರೋಹನ್ ಅವರ ಮನೆಗೆ ಭೇಟಿ ನೀಡಿದ ಎಸ್ಪಿ ಕೆ.ಅಣ್ಣಾಮಲೈ, ಕಾತ್ಯಾಯಿನಿ ಅವರಿಗೆ ಸಾಂತ್ವನ ಹೇಳಿದರು. ಈ ಹಂತದಲ್ಲಿ ಶೋಕತಪ್ತ ಮಹಿಳೆ ಎಸ್ಪಿ ಅವರಲ್ಲಿ, ಪ್ರಕರಣದ ಆರೋಪಿಗಳು ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು, ಅವರಿಗೆ ಕಠಿಣಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು. ಅಪರಾಧಿಗಳಿಗೆ ಕಾನೂನು ಪ್ರಕಾರವೇ ಶಿಕ್ಷೆ ಆಗಲಿದೆ. ಈ ಬಗ್ಗೆ ಸಂಶಯ ಬೇಡ ಎಂದು ಸಂತೈಸಿದ ಅವರು ಇಲಾಖೆ ಕಾನೂನು ಚೌಕಟ್ಟಿನಲ್ಲಿ ಸರಕಾರದಿಂದ ಬಾಲಕನ ಕುಟುಂಬಕ್ಕೆ ದೊರೆಯಬೇಕಾದ ಪರಿಹಾರ ದೊರಕಿಸಿಕೊಡಲು ಕ್ರಮ ವಹಿಸುವುದಾಗಿ ತಿಳಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಗುರುವಾರ ಶವವನ್ನು ಗುರುತಿಸಿ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ಕುರಿತು ತನಿಖೆಯ ಬಳಿಕವೇ ಕಾರಣ ತಿಳಿದುಬರಲಿದೆ ಎಂದೂ ಹೇಳಲಾಗಿತ್ತು, ಆದರೆ ಪತ್ರಿಕೆಗಳಲ್ಲಿ ವರದಿ ಪ್ರಥಮ ಮಾಹಿತಿ ವರದಿ ಮೀರಿ ಬಂದಿದೆ. ಈ ವಿಷಯದಲ್ಲಿ ಸಂಯಮ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಕಡೂರು ಸಿಪಿಐ ಕೆ.ಸತ್ಯನಾರಾಯಣ, ಬೀರೂರು ಪಿಎಸ್ಸೈ ವಿನುತ್, ಸಿಬ್ಬಂದಿ ಮಲ್ಲಿಕಾರ್ಜುನ, ರಾಜಶೇಖರ್, ಮಧು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News