ಜಗಜೀವನರಾಂ ಭವನ ಕಾಮಗಾರಿ ಶೀಘ್ರ ಆರಂಭ: ಮಂಡ್ಯ ಜಿಲ್ಲಾಧಿಕಾರಿ

Update: 2018-07-06 16:51 GMT

ಮಂಡ್ಯ, ಜು.6: ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಸಮುದಾಯ ಭವನದ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ವತಿಯಿಂದ ಡಾ.ಬಾಬು ಜಗಜೀವನರಾಂ ಅವರ 32ನೇ ಪುಣ್ಯತಿಥಿ ಅಂಗವಾಗಿ ಶುಕ್ರವಾರ ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಡಾ.ಬಾಬು ಜಗಜೀವನರಾಂ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಅವರು ಮಾತನಾಡಿದರು. ಡಾ.ಬಾಬು ಜಗಜೀವನರಾಮ ಅವರ ಸಮುದಾಯ ಭವನ ನಿರ್ಮಾಣ ಮಾಡಲು ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಜಾಗವನ್ನು ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸರಕಾರ ಮಂಜೂರಾತಿ ನೀಡಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಕಟ್ಟಡದ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ವೇಳೆ ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅಖಿಲ ಕರ್ನಾಟಕ ಡಾ.ಬಾಬುಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಸರಕಾರ ಕೂಡಲೇ ಭವನ ನಿರ್ಮಾಣಕ್ಕೆ ಹತ್ತು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಬಾಬುಜೀ ದೇಶಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಅವರ ದೂರದೃಷ್ಟಿಯಿಂದ 60-70ರ ದಶಕದಲ್ಲಿ ಆಹಾರಕ್ಕೆ ಇತರ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದ್ದ ಭಾರತ ಸ್ವಾವಲಂಬಿಯಾಯಿತು. ಬಾಬುಜೀ ರೈತರು, ಕಾರ್ಮಿಕರ ಬೆನ್ನೆಲುಬಾಗಿದ್ದರು ಎಂದು ಅವರು ಸ್ಮರಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ಸಿ.ಕೆಂಪಯ್ಯ, ಚಿಕ್ಕರಸಯ್ಯ, ಕಾಂತರಾಜು, ಶ್ರೀನಿವಾಸ್ ಬಸರಾಳು, ಎಂ.ಪಿ.ಚಂದ್ರಶೇಖರ್, ಸ್ವಾಮಿ, ರಾಮಕೃಷ್ಣ, ಬಿ.ಶಿವಾನಂದ, ಶಂಭು, ದಾಸಪ್ಪ, ಎಚ್.ಎಂ.ಪುಟ್ಟರಾಜು, ಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲ್ಷ್ಮಿ, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ಸಿ.ಕೆ.ಪಾಪಯ್ಯ, ಎಸ್.ಸಂತೋಷ್, ಎನ್.ಬಿ.ರಾಜು, ಕೃಷ್ಣ, ಕಿರಣ್, ಎಸ್ಪಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಲತಿ, ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News