ಮೈಸೂರು: ಕಬಿನಿ ಅಚ್ಚುಕಟ್ಟು ನಾಲೆಗೆ ನೀರು ಹರಿಸಲು ಒತ್ತಾಯಿಸಿ ಧರಣಿ

Update: 2018-07-06 17:12 GMT

ಮೈಸೂರು,ಜು.6: ಕೃಷಿ ಚಟುವಟಿಕೆಗೆ ಕಬಿನಿ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕಬಿನಿ ಅಚ್ಚುಕಟ್ಟು ಭಾಗದ ರೈತರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಿದರು.

ನಗರದ ಕಾಡಾ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು, ಕಬಿನಿ ಜಲಾಶಯ ಭರ್ತಿಯಾಗಿ 25 ದಿನಗಳು ಕಳೆದಿದ್ದರೂ ಜಲಾಶಯದಿಂದ 25 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಆದರೆ ಕಬಿನಿ ಅಚ್ಚಕಟ್ಟು ಭಾಗದ ರೈತರ ವ್ಯವಸಾಯಕ್ಕೆ ನೀರು ಬಿಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ರೈತರು 2 ವರ್ಷಗಳಿಂದ ಯಾವುದೇ ಬೆಳೆ ಬೆಳೆಯದೆ ಬರಗಾಲಕ್ಕೆ ಸಿಲುಕಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಕಳೆದ ವರ್ಷ ಜಲಾಶಯ ಭರ್ತಿಯಾದರೂ ನೀರನ್ನು ತಮಿಳುನಾಡಿಗೆ ಹರಿಸಿದ ಕಾರಣ ಜಲಾಶಯ ಖಾಲಿಯಾಗಿ ರೈತರ ವ್ಯವಸಾಯಕ್ಕೆ ನೀರು ಹರಿಸಲು ಕಷ್ಟವಾಯಿತು. ಈ ವರ್ಷವೂ ಅದೇ ಸ್ಥಿತಿ ಬರದಂತೆ ತುರ್ತಾಗಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಕೆ.ಆರ್.ಎಸ್. ಅಣೆಕಟ್ಟೆ ಭರ್ತಿಯಾಗದಿದ್ದರೂ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಆದರೆ ಕಬಿನಿ ಅಣೆಕಟ್ಟೆ ಭರ್ತಿಯಾಗಿದ್ದರೂ ನಾಲೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಅಚ್ಚಕಟ್ಟು ನಾಲೆಗಳಿಗೆ ನೀರು ಹರಿಸುವ ತೀರ್ಮಾನವನ್ನು ತಕ್ಷಣ ಕೈಗೊಳ್ಳದಿದ್ದರೆ ಕಬಿನಿ ಅಚ್ಚಕಟ್ಟು ರೈತರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರಗೂರು ಶಂಕರ್, ಕೆರೆಹುಂಡಿ ರಾಜಣ್ಣ, ಬಿ.ಪಿ.ಪರಶಿವಮೂರ್ತಿ, ತಾಲೂಕು ಅಧ್ಯಕ್ಷರುಗಳಾದ ಕುರುಬೂರು ಸಿದ್ದೇಶ್, ಮಾದಪ್ಪ, ವರಕೋಡು ಕೃಷ್ಣೇಗೌಡ, ಪುಷ್ಪ ಪ್ರಸಾದ್, ಮುಖಂಡರಾದ ಮಣಿಕಂಠ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News