ಮಡಿಕೇರಿ: ಕಾಫಿ ತೋಟಗಳಲ್ಲಿ ಕಾಡಾನೆ ಉಪಟಳ; ವನ್ಯಜೀವಿಗಳ ದಾಳಿ ಬಗ್ಗೆ ಜನಪ್ರತಿನಿಧಿಗಳ ಮೌನ

Update: 2018-07-06 18:03 GMT

ಮಡಿಕೇರಿ, ಜು.6: ಕೊಡಗಿನಲ್ಲಿ ಕಾಡಾನೆಗಳ ಉಪಟಳ ಮತ್ತೆ ಮಿತಿ ಮೀರಿದೆ. ಹಲಸಿನ ಹಣ್ಣಿನ ಆಸೆಯಿಂದ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಹಗಲಿನ ವೇಳೆಯಲ್ಲಿಯೇ ನಿರ್ಭಯದಿಂದ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಚೆಟ್ಟಳ್ಳಿ, ಕಂಡಕೆರೆ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುಮಾರು 8 ಕಾಡಾನೆಗಳು ಒಂದು ಮರಿಯಾನೆಯೊಂದಿಗೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಹೆದ್ದಾರಿ ಮೂಲಕವೇ ತೋಟಗಳನ್ನು ಪ್ರವೇಶಿಸುತ್ತಿರುವ ಕಾಡಾನೆಗಳು ಆನೆಕಂದಕವನ್ನೇ ತಮ್ಮ ರಾಜಮಾರ್ಗವನ್ನಾಗಿ ಮಾಡಿಕೊಂಡಿವೆ. ಗಜಹಿಂಡು ಸಾಲುಸಾಲಾಗಿ ಆನೆಕಂದಕದ ಮೂಲಕ ಎತ್ತರದ ಪ್ರದೇಶಕ್ಕೆ ಏರುವಾಗ ಚಾಣಾಕ್ಷತನದಿಂದ ಒಂದು ಆನೆ ಮತ್ತೊಂದು ಆನೆಗೆ ಬೆಂಗಾವಲಾಗಿ ನಿಂತು ಸಹಕರಿಸುತ್ತಿರುವ ದೃಶ್ಯ ಇದೀಗ ಸಾವಾಜಿಕ ಜಾಲತಾಣಗಳಿಗೆ ಆಹಾರವಾಗಿಬಿಟ್ಟಿದೆ.

ಜಿಲ್ಲೆಯ ವಿವಿಧೆಡೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹಿಂಡು ಹಿಂಡಾಗಿ ಸಂಚರಿಸುತ್ತಿರುವ ಕಾಡಾನೆಗಳು ಬೆಳೆ ನಾಶ ಮಾಡುತ್ತಿರುವುದಲ್ಲದೆ ಮಾನವ ಜೀವಹಾನಿಗೂ ಕಾರಣವಾಗಿವೆ. ಈ ಹಿಂದೆ ರಾತ್ರಿಯ ವೇಳೆಯಲ್ಲಿ ತೋಟದಿಂದ ತೋಟಕ್ಕೆ ಸಂಚರಿಸುತ್ತಿದ್ದ ಕಾಡಾನೆಗಳು ಕಳೆದ ಒಂದು ವರ್ಷದಿಂದ ಹಾಡಹಗಲೇ ಹೆದ್ದಾರಿಗಳಲ್ಲಿ ಪ್ರತ್ಯಕ್ಷವಾಗತೊಡಗಿವೆ. ರಸ್ತೆಗಳ ಮೂಲಕವೇ ತೋಟಗಳನ್ನು ಪ್ರವೇಶಿಸುತ್ತಿರುವ ಗಜಹಿಂಡಿನಿಂದಾಗಿ ಬೆಳೆಳು ಸಂಪೂರ್ಣವಾಗಿ ನಾಶವಾಗುತ್ತಿವೆ.

ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಅಸಹಾಯಕ ಸ್ಥಿತಿಯಲ್ಲಿದ್ದಂತೆ ಕಂಡು ಬರುತ್ತಿದೆ. ಕಾಡಾನೆಗಳ ದಾಳಿಯಿಂದ ಜೀವಹಾನಿಗಳು ಸಂಭವಿಸಿದರೆ ಪರಿಹಾರದ ಚೆಕ್ ವಿತರಿಸುವುದಕ್ಕಷ್ಟೆ ಅಧಿಕಾರಿಗಳು ಸೀಮಿತವಾದಂತೆ ಇದೆ. ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿರುವ ಅಧಿಕಾರಿಗಳು ಅವುಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆಯೇ ಹೊರತು ಯಾವುದೇ ಪರಿಹಾರೋಪಾಯಗಳನ್ನು ಸೂಚಿಸುತ್ತಿಲ್ಲ. ಗ್ರಾಮಸ್ಥರೇ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗಟ್ಟುವ ಸ್ಥಿತಿ ಕೆಲವು ಭಾಗಗಳಲ್ಲಿ ನಿರ್ಮಾಣವಾಗಿದೆಯಾದರೂ ಈ ಪಟಾಕಿ ಬೆದರಿಕೆಗೂ ಕಾಡಾನೆ ಹಿಂಡು ಅಂಜದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲವಾದ ಕಾರಣ ಕಾಫಿ ತೋಟಗಳಲ್ಲಿ ಹಲಸಿನ ಹಣ್ಣು ಯಥೇಚ್ಛವಾಗಿ ದೊರೆಯುತ್ತಿದ್ದು, ಇದೇ ಕಾರಣಕ್ಕೆ ಕಾಡಾನೆಗಳ ಹಿಂಡು ತೋಟಗಳಲ್ಲಿ ಬೀಡು ಬಿಟ್ಟಿವೆ. ದಿನಕ್ಕೊಂದು ದಾರಿ, ದಿನಕ್ಕೊಂದು ಊರು ಎಂದು ಸಿಕ್ಕ ಸಿಕ್ಕ ಹಾದಿಯಲ್ಲಿ ರಾತ್ರಿ ಹಗಲೆನ್ನದೆ ಸಾಗುತ್ತಿರುವ ಕಾಡಾನೆಗಳು ಕಾರ್ಮಿಕ ವರ್ಗ ಹಾಗೂ ವಿದ್ಯಾರ್ಥಿಗಳಲ್ಲಿ ಭೀತಿಯನ್ನು ಮೂಡಿಸುತ್ತಲೇ ಇವೆ. ಅರಣ್ಯ ಅಧಿಕಾರಿಗಳು ಬದಲಾಗುತ್ತಿರುವ ಗಜಮಾರ್ಗದ ಸುಳಿವು ಕಂಡು ಹಿಡಿಯುವಷ್ಟರಲ್ಲಿ ಚಳ್ಳೆಹಣ್ಣು ತಿನ್ನಿಸುತ್ತಿರುವ ಈ ವನ್ಯಜೀವಿಗಳು ರಾಜಮಾರ್ಗದ ಮೂಲಕ ಗ್ರಾಮ, ಗ್ರಾಮಗಳನ್ನು ಬದಲಿಸುತ್ತಿವೆ.

ಅತಿಯಾದ ಮಳೆ ಮತ್ತು ನಿರಂತರ ಕಾಡಾನೆ ದಾಳಿಯಿಂದ ಜಿಲ್ಲೆಯ ಬೆಳೆಗಾರರು ರೋಸಿ ಹೋಗಿದ್ದಾರೆ. ಕಷ್ಟಪಟ್ಟುಉಳಿಸಿ ಬೆಳೆಸಿದ ತೋಟ ನಷ್ಟಕ್ಕೆ ಗುರಿಯಾಗುತ್ತಿರುವ ಬಗ್ಗೆ ಅಸಹಾಯಕರಾಗಿದ್ದಾರೆ. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮತ್ತು ಸರಕಾರದ ಕಡೆಗಣನೆಯಿಂದ ಜಿಲ್ಲೆಯ ಕೃಷಿಕ ವರ್ಗ ಕಂಗಾಲಾಗಿದೆ. ಸರಕಾರಗಳು ಬದಲಾಗುತ್ತಿವೆ, ಆದರೆ ಕಾಡಾನೆಗಳ ಬಗೆಗಿನ ಭರವಸೆ ಒಂದೇ ರೀತಿಯದ್ದಾಗಿದೆ. ಜಿಲ್ಲೆಗೆ ಬರುವ ಸಚಿವರು ಕಾಡಾನೆ ಉಪಟಳಕ್ಕೆ ಸೂಕ್ತ ಪರಿಹಾರ ಸೂಚಿಸುವ ಭರವಸೆ ನೀಡುತ್ತಾರೆಯೇ ಹೊರತು ಇಲ್ಲಿಯವರೆಗೆ ಸಂಕಷ್ಟವನ್ನು ಬಗೆಹರಿಸಿಲ್ಲವೆಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ಮೂಲಕ ಹಾದು ಹೋಗಿರುವ ಹೈಟೆನ್‌ಷನ್ ವಿದ್ಯುತ್ ಮಾರ್ಗವನ್ನು ನಿರ್ಮಿಸುವ ಸಂದರ್ಭ ಸಾವಿರಾರು ಮರಗಳನ್ನು ನಾಶ ಮಾಡಲಾಗಿದೆ. ಪ್ರಾಕೃತಿಕ ಅಸಮತೋಲನದಿಂದ ಕಾಡಾನೆಗಳು ನಾಡಿಗೆ ಬರಲು ಆರಂಭಿಸಿವೆ ಎಂದು ಪರಿಸರವಾದಿಗಳು ಅಭಿಪ್ರಾಯಪಡುತ್ತಿದ್ದಾರೆ.
ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಅಗತ್ಯವಿರುವಷ್ಟು ಆಹಾರ ಲಭ್ಯವಾಗದೇ ಇರುವುದು ಮತ್ತು ಕಾಡಾನೆಗೆ ಬೇಕಾದ ಸಸ್ಯರಾಶಿಯನ್ನು ಬೆಳೆಸದೆ ತೇಗದ ಮರಗಳನ್ನು ಬೆಳೆಸಿರುವುದೇ ಪ್ರಾಣಿ ಉಪಟಳಕ್ಕೆ ಕಾರಣವೆಂದು ಜಿಲ್ಲೆಯ ಶಾಸಕರು ಹೇಳಿಕೊಳ್ಳುತ್ತಾರೆ. ಆದರೆ ಯಾರೊಬ್ಬರೂ ಸಮಸ್ಯೆಗೆ ಪರಿಹಾರವೇನೆಂದು ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುತ್ತಿಲ್ಲ. ಪ್ರಶ್ನೆ ಕೇಳುವಾಗ ಉತ್ತರ, ಸಭೆಗಳು ನಡೆದಾಗ ಪ್ರತಿಕ್ರಿಯೆ, ಚುನಾವಣೆ ಬಂದಾಗ ಆರೋಪ, ಪ್ರತ್ಯಾರೋಪಗಳಿಗಷ್ಟೇ ಕಾಡಾನೆ ಉಪಟಳದ ಸಮಸ್ಯೆ ಬಳಕೆಯಾಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಗಜಕಾಳಗದಿಂದಾಗಿ ಜಿಲ್ಲೆಯ ಜನ ಬಲಿಪಶುಗಳಾಗುತ್ತಿದ್ದಾರೆ.

ಒಂದೆಡೆ ಕಾಡಾನೆ ದಾಳಿಗೆ ಅಮಾಯಕರ ಜೀವ ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ಮೂಕ ಕಾಡಾನೆಗಳು ಅಕಾಲಿಕ ಸಾವಿಗೆ ತುತ್ತಾಗುತ್ತಿವೆ. ಈ ನಡುವೆ ಹುಲಿದಾಳಿಯ ಘಟನೆಗಳು ಕೂಡ ಕಳೆದ ಎರಡು ತಿಂಗಳುಗಳಿಂದ ಗ್ರಾಮೀಣ ಜನರ ನಿದ್ದೆಗೆಡಿಸಿದೆ. ಆದಾಯದ ಮೂಲವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡು ಬಡಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದರೆ ವನ್ಯಜೀವಿಗಳ ಉಪಟಳವನ್ನು ಗಂಭೀರವಾಗಿ ಪರಿಗಣಿಸದ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಜನರ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಸೋಲಾರ್ ಬೇಲಿ, ಕಂದಕ, ಹಳೆಯ ರೈಲು ಕಂಬಿಗಳ ಬೇಲಿ ನಿರ್ವಾಣದಂತಹ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಕಡತಕ್ಕಷ್ಟೇ ಸೀಮಿತಗೊಳಿಸಿರುವ ಆಡಳಿತ ವ್ಯವಸ್ಥೆ ಬಗ್ಗೆ ಜನರಿಗೆ ಅಸಹನೆ ಮೂಡಿದೆ.

ಪ್ರತಿಭಟನೆಯ ಎಚ್ಚರಿಕೆ
ವನ್ಯಜೀವಿಗಳ ಉಪಟಳ ತಡೆಗೆ ಸಮ್ಮಿಶ್ರ ಸರಕಾರ ಶೀಘ್ರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಬೆಳೆಗಾರರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಎಚ್ಚರಿಕೆಯನ್ನು ನೀಡಿವೆ.

Writer - ವರದಿ: ಎಸ್.ಕೆ.ಲಕ್ಷ್ಮೀಶ್

contributor

Editor - ವರದಿ: ಎಸ್.ಕೆ.ಲಕ್ಷ್ಮೀಶ್

contributor

Similar News