ಚಿಕ್ಕಮಗಳೂರಲ್ಲಿ ಭಾರಿ ಮಳೆ : ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ

Update: 2018-07-07 11:50 GMT

ಚಿಕ್ಕಮಗಳೂರು, ಜು.7: ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ಮಳೆಯ ಆರ್ಭಟಕ್ಕೆ ಬಿಡುವು ನೀಡಿದ್ದ ವರುಣ ಶುಕ್ರವಾರ ಸಂಜೆಯಿಂದ ಮತ್ತೆ ಆರ್ಭಟಿಸಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ನದಿ ನೀರು ತೋಟಗಳಿಗೆ ನುಗ್ಗಿ ಭಾರೀ ಹಾನಿ ಉಂಟು ಮಾಡಿದೆ.

ಭಾರೀ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ನದಿಗಳಾ ತುಂಗಾ, ಭದ್ರಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿದು ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದ ಘಟನೆಗಳು ಶನಿವಾರ ಬೆಳಗ್ಗೆ ವರದಿಯಾಗಿದೆ. ಜಿಲ್ಲೆಯ ಮಲೆನಾಡು ತಾಲೂಕುಗಳ ವ್ಯಾಪ್ತಿಯಲ್ಲಿನ ಮೂಡಿಗೆರೆ, ಕಳಸ, ಬಾಳೆಹೊನ್ನೂರು, ಜಯಪುರ, ಶೃಂಗೇರಿ, ಕೊಪ್ಪ, ಆಲ್ದೂರು, ಮಾಗುಂಡಿ ಮತ್ತಿತರ ಪಟ್ಟಣಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆ ಸುರಿದಿದ್ದು, ಮಳೆ ರಾತ್ರಿ ಇಡೀ ಸುರಿದ ಪರಿಣಾಮ ಶನಿವಾರ ಬೆಳಗ್ಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ್ದವು. 

ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಭದ್ರಾ ಬನದಿ ಹಾಗೂ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯವು ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ನದಿ ನೀರು, ಕೆಲವೆಡೆ ರಸ್ತೆ, ಅಡಿಕೆ ತೋಟಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಗಿದೆ. ಭಾರೀ ಮಳೆಯಿಂದಾಗಿ ಮಲೆನಾಡಿನ ಕೆಲ ಪಟ್ಟಣ, ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಜನತೆ ಕತ್ತಲೆ ಕೂಪದಲ್ಲಿ ಮುಳುಗುವಂತಾಗಿತ್ತು.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಕುದುರೆಮುಖ, ಕಳಸ, ಜಾಂಬಳೆ, ಬಾಳೆಹೊಳೆ, ಜಾವಳಿ, ಹರೀಬೈಲು ಪ್ರದೇಶದಲ್ಲಿ ಶುಕ್ರವಾರದಿಂದ ಶನಿವಾರ ಮುಂಜಾನೆ ವರೆಗೂ ಧಾರಾಕಾರ ಮಳೆ ಸುರಿದ ಪರಿಣಾಮ ಇಲ್ಲಿ ಹರಿಯುವ ಭದ್ರಾ ನದಿಯಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾದ ಪರಿಣಾಮ ಕಳಸ- ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆಗೆ ನೀರು ಅಪ್ಪಳಿಸಿ ಮುಳುಗಡೆಯ ಭೀತಿ ಉಂಟಾಗಿತ್ತು. ಈ ಕಾರಣಕ್ಕೆ ದೂರದ ಪ್ರವಾಸಿಗರು ಸೇತುವೆಯಲ್ಲಿ ವಾಹನ ಸಂಚಾರದ ಸಾಹಸಕ್ಕೆ ಕೈಹಾಕದೇ ಸಂಚಾರವನ್ನು ಸ್ಥಗಿತಗೊಳಿಸಿದ್ದರು. 

ಇನ್ನು ಮಲೆನಾಡು ವ್ಯಾಪ್ತಿಯ ಶೃಂಗೇರಿ ತಾಲೂಕಿನಲ್ಲೂ ಶುಕ್ರವಾರ ಆರಂಭವಾದ ಮಳೆ ಶನಿವಾರವೂ ಮುಂದುವರಿದ ಪರಿಣಾಮ ಈ ಭಾಗದಲ್ಲಿ ಹರಿಯುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿದು, ಕಳೆದೊಂದು ತಿಂಗಳ ಅವಧಿಯಲ್ಲಿ ಶೃಂಗೇರಿ ಪಟ್ಟಣದ ಶಾರದಾಂಬಾ ದೇವಾಲಯ ಸಮೀಪದಲ್ಲಿರುವ ಗಾಂಧಿ ಮೈದಾನಲ್ಲಿ ಮೂರನೇ ಬಾರಿ ತುಂಗಾ ನದಿ ನೀರು ನುಗ್ಗಿದೆ. ಅಲ್ಲದೆ ಪಟ್ಟಣದ ಬೈಪಾಸ್ ರಸ್ತೆಗಳು ನದಿ ನೀರಿನ ನೆರೆ ಬಂದ ಕಾರಣ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇದಿಸಲಾಗಿತ್ತು. ಭಾರೀ ಮಳೆಯಿಂದಾಗಿ ಶೃಂಗೇರಿ ಕೆರೆಮನೆ, ಶೃಂಗೇರಿ-ಮಸಿಗೆ ಸಂಪರ್ಕ ರಸ್ತೆಗಳ ಮೇಲೆ ನದಿ ನೀರು ನಿಂತು ಸಂಪರ್ಕ ಕಡಿತಗೊಂಡಿತ್ತು. ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ಅಡಿಕೆ ತೋಟಗಳಿಗೆ ತುಂಗಾ ನದಿ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. 

ಶುಕ್ರವಾರ ಸಂಜೆಯಿಂದ ಕೊಪ್ಪ ತಾಲೂಕಿನ ಜಯಪುರದಲ್ಲೂ ಮಳೆ ಸುರಿಯುತ್ತಿದ್ದು, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲೂ ಮಳೆ ಆರ್ಭಟಿಸಿದೆ. ಮೂಡಿಗೆರೆ ತಾಲೂಕು ವ್ಯಾಪ್ತಿಯ ಚಾರ್ಮಾಡಿ ಘಾಟ್‍ನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಘಾಟಿಯಲ್ಲಿ ಧಟ್ಟ ಮಂಜು ಕವಿದಿರುವ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಮಲೆನಾಡು ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ, ರಾತ್ರಿ, ಸುರಿದ ಮಳೆ ಶನಿವಾರವೂ ಮುಂದುವರಿದಿದ್ದು, ಎಲ್ಲೆಡೆ ಸಾಧಾರಣ ಮಳೆ ಸುರಿಯಲಾರಂಭಿಸಿದೆ. ಇನ್ನು ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಶುಕ್ರವಾರ, ಶನಿವಾರ ಸಾಧಾರಣ ಮಳೆ ಸುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News