ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರಧಾನಿ ಮೋದಿಯನ್ನೇಕೆ ಪ್ರಶ್ನಿಸಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2018-07-07 13:20 GMT

ಬೆಂಗಳೂರು, ಜು.7: ಪೆಟ್ರೋಲ್ ಬೆಲೆ ಅತಿ ಹೆಚ್ಚು ನಿಗದಿಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸದ ಬಿಜೆಪಿ ನಾಯಕರು, ಇದೀಗ ನಾನು ಬಜೆಟ್‌ನಲ್ಲಿ 1 ರೂ. ಹೆಚ್ಚಿಸಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದ ಕುಮಾರ ಕೃಪಾದ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಬಜೆಟ್‌ನಲ್ಲಿ ಅನ್ಯಾಯ ಮಾಡಲಾಗಿದೆ ಎಂದೆಲ್ಲಾ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಕೇವಲ ಸಾಲ ಮನ್ನಾಕ್ಕಾಗಿ ನಾನು ಬಜೆಟ್ ಮಾಡಿದ್ದೇನೆ ಎಂದಿದ್ದಾರೆ. ಆದರೆ, ಬಿಜೆಪಿಯವರಿಗೆ ಕೆಲಸ ಇಲ್ಲ. ಬಜೆಟ್ ಅನ್ನು ಅರ್ಥ ಮಾಡಿಕೊಂಡಿಲ್ಲ. ಅವರ ಟೀಕೆಗಳಿಗೆ ಇನ್ನು ನಾಲ್ಕು ದಿನಗಳಲ್ಲಿ ಸದನದಲ್ಲಿಯೇ ಉತ್ತರಿಸುತ್ತೇನೆ ಎಂದರು.

ಜನತಾ ದರ್ಶನದಲ್ಲಿ ಅನೇಕರು ಉದ್ಯೋಗಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಯುವಕರು, ಯವತಿಯರು, ಅಂಗವಿಕಲರು ಸೇರಿ ಹಲವರು ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಸಿದ 250 ಅಂಗವಿಕಲರಿಗೆ ಉದ್ಯೋಗ ಕೊಡುವುದಕ್ಕೆ ಸೂಚಿಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸೂಚನೆ: ಪ್ರತಿ ಜಿಲ್ಲೆಯಲ್ಲೂ ಜನರ ಸಮಸ್ಯೆ ಆಲಿಸುವಂತೆ ಸೂಚನೆ ಕೊಟ್ಟಿದ್ದೇನೆ. ರಾಜ್ಯದ 30 ಜಿಲ್ಲೆಯ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಇಂದು ಆದೇಶ ಹೊರಡಿಸುತ್ತಿದ್ದೇನೆ. ಜನರ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಜನರ ಸಮಸ್ಯೆ ಆಲಿಸಿ ಅವರಿಗೆ ಪರಿಹಾರ ಒದಗಿಸುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.

‘ಆತ್ಮಹತ್ಯೆ ಬೇಡ’

ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಅವರ ಸಾಲಮನ್ನಾ ಮಾಡಲಾಗಿದೆ. ಆದರೂ, ಕೆಲ ಕಡೆ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಲ್ಲದೆ, ರೈತರನ್ನು ಕಾಪಾಡಲು ನಾನು ಬಂದಿದ್ದೇನೆ. ಹಂತ ಹಂತವಾಗಿ ರೈತರ ಸಮಸ್ಯೆ ಬಗೆಹರಿಸುತ್ತೇನೆ. ರೈತರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News