ಕೊಡಗಿನಲ್ಲಿ ಧಾರಾಕಾರ ಮಳೆ: ತುಂಬಿ ಹರಿದ ಕಾವೇರಿ ನದಿ

Update: 2018-07-07 13:51 GMT

ಮಡಿಕೇರಿ, ಜು.7: ಕಳೆದ 24 ಗಂಟೆಗಳಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಕೊಡಗು ಜಿಲ್ಲೆಯ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯದಿಂದ ನೀರನ್ನು ಹೊರ ಬಿಡಲಾಗಿದೆ.

ಮೃಗಶಿರ ಮಳೆಯ ನಂತರ ಸುರಿದ ಆರ್ದ್ರಾ ಮಳೆ ಜಿಲ್ಲೆಯಲ್ಲಿ ಕೊಂಚ ಬಿಡುವನ್ನು ನೀಡಿತ್ತಾದರೂ ಜು.6 ರಿಂದ ಆರಂಭಗೊಂಡಿರುವ ಪುನರ್‍ವಸು ಮಳೆ ಮತ್ತೆ ಮಹಾಮಳೆಯ ಅನುಭವವನ್ನು ನೀಡುತ್ತಿದೆ. ಶುಕ್ರವಾರ ಮಧ್ಯಾಹ್ನದಿಂದ ಆರಂಭಗೊಂಡ ಮಳೆಯು ನಿರಂತರವಾಗಿ ಸುರಿದ ಕಾರಣ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. 

ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ ದಾಖಲೆಯ ಮಳೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಭಾಗದಲ್ಲಿ ರಸ್ತೆ ಜಲಾವೃತಗೊಂಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮಸ್ಥರು ಹಾಗೂ ಪ್ರವಾಸಿಗರನ್ನು ಕರೆದೊಯ್ಯಲು ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ. ತಲಕಾವೇರಿಯಲ್ಲಿ ಮಂಜು ಸಹಿತ ಮಳೆಯಾಗುತ್ತಿದೆ.

ಮಡಿಕೇರಿ ನಗರದಲ್ಲಿ ನಿರಂತರ ಮಳೆಯೊಂದಿಗೆ ಮೈಕೊರೆಯುವ ಚಳಿ ಇದೆ. ಮಂಗಳಾದೇವಿ ನಗರದಲ್ಲಿ ಬರೆ ಕುಸಿದಿದ್ದು, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಉಳಿದ ಬಡಾವಣೆಗಳಲ್ಲೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ನಗರದ ಶ್ರೀಓಂಕಾರೇಶ್ವರ ದೇವಾಲಯದ ಕೆರೆ ತುಂಬಿ ಹರಿಯುತ್ತಿದ್ದು, ಆವರಣ ಜಲಾವೃತಗೊಂಡಿದೆ. ಅಬ್ಬಿ ಜಲಪಾತ ತುಂಬಿ ಹರಿಯುತ್ತಿದ್ದು, ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಕಾರ್ಮಿಕರಿಗೆ ರಜೆ
ಸುಂಟಿಕೊಪ್ಪ ಹೋಬಳಿಯಲ್ಲಿ ಪುನರ್ವಸು ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಜು.6 ರಂದು ಸಂಜೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರಿಗೆ ರಜೆ ನೀಡಲಾಗಿದೆ. ಹಟ್ಟಿಹೊಳೆಗೆ ಒಂದೇ ದಿನದಲ್ಲಿ 8 ಇಂಚು, ಮಾದಾಪುರಕ್ಕೆ 5 ಇಂಚು, ಐಗೂರಿಗೆ 7 ಇಂಚು, ಹರದೂರಿಗೆ 6 ಇಂಚು, ಸುಂಟಿಕೊಪ್ಪದಲ್ಲಿ 5 ಇಂಚು ಮಳೆಯಾಗಿದೆ. ಹಟ್ಟಿಹೊಳೆ, ಮಾದಾಪುರ, ಐಗೂರು, ಚೋರನಹೊಳೆ, ಹರದೂರು ಹೊಳೆ ತುಂಬಿ ಹರಿಯುತ್ತಿದ್ದು ನಾಲೆ, ತೊರೆಗಳು ತುಂಬಿ ಹರಿಯುತ್ತಿವೆ. 

ವಿರಾಜಪೇಟೆ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಕೆರೆ, ತೋಡುಗಳು, ಕಾವೇರಿ ಹೊಳೆಯ ನೀರಿನ ಮಟ್ಟ ಏರಿಕೆಯಾಗಿದೆ.
ಕದನೂರು, ಬಿಟ್ಟಂಗಾಲ ಹಾಗೂ ಆರ್ಜಿ ಗ್ರಾಮಗಳಲ್ಲಿ ಗದ್ದೆ ಹಾಗೂ ಬಾಣೆ ಜಾಗಗಳು ಜಲಾವೃತ್ತಗೊಳ್ಳಲು ಆರಂಭಗೊಂಡಿವೆ. ಆರ್ಜಿ ಗ್ರಾಮದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಗ್ರಾಮದ ಅನ್ವಾರುಲ್‍ ಹುದಾ ವಿದ್ಯಾ ಸಂಸ್ಥೆಯ ಮುಂಭಾಗದ ಕೊಡಗು ಕೇರಳ ರಾಜ್ಯ ಹೆದ್ದಾರಿಯ ಸೇತುವೆಯ ಮೇಲೆ ಒಂದಡಿಯಷ್ಟು ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಯಾವುದೇ ರೀತಿ ಅಡಚಣೆಯಾಗಿಲ್ಲ. ಬಲಮುರಿಯಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದೆ. 

ಕೊಡಗು ಜಿಲ್ಲೆಯ ಮಳೆ ವಿವರ
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 98.01 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ 15.39 ಮಿ.ಮೀ.,ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1461.73 ಮಿ.ಮೀ, ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 797.39 ಮಿ.ಮೀ ಮಳೆಯಾಗಿತ್ತು.                                       

ಭರ್ತಿಯಾದ ಹಾರಂಗಿ ಜಲಾಶಯ: ಹೆಚ್ಚುವರಿ ನೀರು ನದಿಗೆ

ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದಾಗಿ ನದಿ ನೀರಿನ ಒಳಹರಿವು ಹೆಚ್ಚಾದ ಕಾರಣ ಹಾರಂಗಿ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್‍ಗಳ ಮೂಲಕ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಹರಿಯ ಬಿಡಲಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಯಾಗಿದ್ದು, ಸಂಜೆ 5 ಗಂಟೆಗೆ 2856 ಅಡಿ ಇತ್ತು. ಜಲಾಶಯಕ್ಕೆ 24,450 ಕ್ಯೂಸೆಕ್ಸ್ ನೀರು ಒಳಹರಿವು ಇತ್ತು.

ಜಲಾಶಯ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಾಲ್ಕು ಗೇಟ್‍ಗಳಿಂದ ಸುಮಾರು 1200 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಯಿತು. 8.5 ಟಿ.ಎಂ.ಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಇದೀಗ 7.25 ಟಿ.ಎಂ.ಸಿ.ಗಳಷ್ಟು ನೀರಿನ ಸಂಗ್ರಹವಿದೆ. 

ಕಳೆದ ವರ್ಷ ಜುಲೈ 23 ರಂದು ಭರ್ತಿಯಾಗಿದ್ದ ಜಲಾಶಯ ಈ ಬಾರಿ 15 ದಿನ ಮುಂಚಿತವಾಗಿ ಜುಲೈ ಮೊದಲ ವಾರದಲ್ಲಿಯೇ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ ಹರಿಯುವ ನೀರು ಕೂಡಿಗೆ ಬಳಿ ಹಾರಂಗಿ ನದಿ ಮೂಲಕ ಕಾವೇರಿ ನದಿ ಸೇರಿ ನಂತರ ಕೃಷ್ಣರಾಜ ಸಾಗರವನ್ನು ಸೇರಲಿದೆ. ಜಲಾಶಯದಿಂದ ನೀರು ಬಿಡುವ ಸಂದರ್ಭ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಪ್ರಸಾದ್, ನೀರಾವರಿ ಇಲಾಖೆಯ  ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಅಭಿಯಂತರ ನಾಗರಾಜು, ಗೇಟ್ ರೀಡರ್, ಗಿರೀಶ್, ನೀರು ಬಳಕೆದಾರರ ಸಂಘದ ಪಾಧಿಕಾರಿಗಳು ಹಾಗೂ ರೈತ ಮುಖಂಡರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News