ಪೆಟ್ರೋಲ್-ಡಿಸೇಲ್ ಮೇಲೆ ತೆರಿಗೆ ಏರಿಕೆಗೆ ವಿರೋಧ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲು ಒತ್ತಾಯ

Update: 2018-07-07 14:25 GMT

ಬೆಂಗಳೂರು, ಜು.7: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಪೆಟ್ರೋಲ್- ಡಿಸೇಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿರುವ ಕ್ರಮ ಸರಿಯಲ್ಲ. ಕೂಡಲೆ ಶಾಸಕಾಂಗ ಪಕ್ಷದ ಸಭೆ ಕರೆದು ಈ ವಿಚಾರದ ಕುರಿತು ಚರ್ಚಿಸಬೇಕು ಎಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಹಾಗೂ ಅಲ್ಪಸಂಖ್ಯಾತರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ಪತ್ರ ಬರೆದು ಆಗ್ರಹಿಸಿರುವ ಬೆನ್ನಲ್ಲೆ ಇನ್ನು ಹಲವು ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಲು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಜನಸಾಮಾನ್ಯರು ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವಾಗ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಲ್ಲದೆ, ವಿದ್ಯುತ್ ದರವನ್ನು ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕ್ಷೇತ್ರಗಳಲ್ಲಿ ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ಶಾಸಕಾಂಗ ಪಕ್ಷದ ಸಭೆ ಕರೆದು ಈ ವಿಚಾರಗಳ ಕುರಿತು ಚರ್ಚಿಸಿ, ಪೆಟ್ರೋಲ್, ಡಿಸೇಲ್, ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದು ಸೂಕ್ತ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಶಾಸಕರು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕ ಭಾಗಕ್ಕೆ ಬಜೆಟ್‌ನಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಕೂಗು ಎದ್ದಿದೆ. ಪ್ರಾದೇಶಿಕ ತಾರತಮ್ಯ ಸರಿಪಡಿಸುವುದರ ಜೊತೆಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಇರಬೇಕು. ವಿಪಕ್ಷಗಳು ಈ ಬಜೆಟ್ ಅನ್ನು ಕೆಲವು ಜಿಲ್ಲೆಗಳಿಗೆ ಸೀಮಿತವಾದದ್ದು, ‘ಅಣ್ಣ-ತಮ್ಮ ಬಜೆಟ್’ ಎಂದು ಟೀಕಿಸುತ್ತಿದ್ದಾರೆ. ಮೇಲ್ನೋಟಕ್ಕೆ ಜೆಡಿಎಸ್ ತನ್ನ ಮತಬ್ಯಾಂಕ್ ಭದ್ರಗೊಳಿಸಿಕೊಳ್ಳಲು ಪ್ರಯತ್ನಪಟ್ಟಿರುವುದು ಕಾಣುತ್ತಿದೆ.

ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಪರಿಸ್ಥಿತಿ ಇದೇ ರೀತಿ ಮುಂದೆ ಬಂದರೆ, ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತೀರ ಹಿನ್ನಡೆಯಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಈ ಬಗ್ಗೆ ತಾವಿಬ್ಬರೂ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವುದು ಉತ್ತಮ ಎಂದು ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್‌ಗೆ ಕೆಲವು ಶಾಸಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News