ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆಗೆ ಕಠಿಣ ಕ್ರಮ: ಮಹಾರಾಷ್ಟ್ರ ಸರಕಾರದ ಒಪ್ಪಿಗೆಗಾಗಿ ಕಾಯುತ್ತಿರುವ ರೈಲ್ವೇ

Update: 2018-07-07 15:01 GMT

ಮುಂಬೈ, ಜು.7: ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಶಿಕ್ಷಿಸಲು ಅಧಿಕಾರ ನೀಡುವಂತೆ ಮಹಾರಾಷ್ಟ್ರ ಪರಿಸರ ಇಲಾಖೆಗೆ ಎರಡು ವಾರದ ಹಿಂದೆ ಕೋರಿಕೆ ಸಲ್ಲಿಸಲಾಗಿದ್ದು ಇಲಾಖೆಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 23ರಂದು ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದಿದ್ದು, ಇದಕ್ಕೆ ಎರಡು ದಿನದ ಹಿಂದೆಯೇ ಕೇಂದ್ರ ರೈಲ್ವೇ ಹಾಗೂ ಪಶ್ಚಿಮ ರೈಲ್ವೇ ಮಂಡಳಿಗಳು ಇಲಾಖೆಗೆ ಕೋರಿಕೆ ಸಲ್ಲಿಸಿವೆ. ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಜಾರಿಗೊಳಿಸುವ ಪ್ರಾಧಿಕಾರಗಳ ಪಟ್ಟಿಯಲ್ಲಿ ರೈಲ್ವೇಯನ್ನು ಸೇರಿಸಬೇಕೆಂದು ರಾಜ್ಯ ಪರಿಸರ ಇಲಾಖೆಯನ್ನು ಕೋರಲಾಗಿದೆ. ಆದರೆ ಎರಡು ವಾರದ ಬಳಿಕವೂ ರಾಜ್ಯ ಸರಕಾರ ನಮ್ಮ ಕೋರಿಕೆಗೆ ಪ್ರತಿಕ್ರಿಯೆ ನೀಡಿಲ್ಲ. ನಮಗೆ ಅಧಿಕೃತವಾಗಿ ಅಧಿಕಾರ ನೀಡುವವರೆಗೆ , ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲು ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ನಿಷೇಧ ಜಾರಿಗೊಳಿಸುವ ಬಗ್ಗೆ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ನೀಡುವಂತೆ ರೈಲ್ವೇ ಇಲಾಖೆಯ ಮನವಿಯಲ್ಲಿ ತಿಳಿಸಲಾಗಿದೆ. ಸರಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ರೈಲು ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ತಡೆಯಲು ರೈಲ್ವೇ ಇಲಾಖೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ರೈಲ್ವೇ ನಿಲ್ದಾಣಗಳ ಸ್ಟಾಲ್‌ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಸದಂತೆ ಸ್ಟಾಲ್ ಮಾಲಕರಿಗೆ ಸೂಚನೆ ನೀಡಲಾಗಿದೆ. ಅವರು ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಮತ್ತು ಪಶ್ಚಿಮ ರೈಲ್ವೇ ಇಲಾಖೆ ಪ್ಲಾಸ್ಟಿಕ್ ಬಾಟಲಿಗಳನ್ನು ಪುಡಿ ಮಾಡುವ ಯಂತ್ರಗಳನ್ನು ಕೆಲವು ನಿಲ್ದಾಣಗಳಲ್ಲಿ ಪ್ರಯೋಗಾರ್ಥವಾಗಿ ಅಳವಡಿಸಿದೆ. ಕೇಂದ್ರ ರೈಲ್ವೇಯು ಇನ್ನೂ 21 ನಿಲ್ದಾಣಗಳಲ್ಲಿ 35 ಯಂತ್ರಗಳನ್ನು ಹಾಗೂ ಪಶ್ಚಿಮ ರೈಲ್ವೇಯು 18 ನಿಲ್ದಾಣಗಳಲ್ಲಿ 25 ಯಂತ್ರಗಳನ್ನು ಸ್ಥಾಪಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಿದೆ ಎಂದು ರೈಲ್ವೇಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News