ಬಜೆಟ್‌ನಲ್ಲಿ ಉತ್ತರ ಕರ್ನಾಟಕ-ಕರಾವಳಿ ಭಾಗಕ್ಕೆ ಅನ್ಯಾಯ: ಜಗದೀಶ್ ಶೆಟ್ಟರ್

Update: 2018-07-07 15:04 GMT

ಹುಬ್ಬಳ್ಳಿ, ಜು.7: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಂತೆ ಬಜೆಟ್‌ನಲ್ಲಿಯೂ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಅನ್ಯಾಯವನ್ನು ಮುಂದುವರೆಸಲಾಗಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯ, ಹಾಸನ, ರಾಮನಗರಕ್ಕೆ ಸೀಮಿತವಾದ ಬಜೆಟ್ ಮಂಡನೆ ಮಾಡಿದ್ದಾರೆ. ನಮ್ಮ ಭಾಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ, ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದರು.

ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ನಂಜುಂಡಪ್ಪ ವರದಿಯಲ್ಲಿನ ಶಿಫಾರಸ್ಸುಗಳ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು ಬಜೆಟ್‌ನಲ್ಲಿ ಯಾವ ಪ್ರಸ್ತಾವನೆಯನ್ನು ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಮಾಜಿ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿಗೆ ಬರೆದಿರುವ ಪತ್ರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಚ್.ಕೆ.ಪಾಟೀಲ್ ಸಚಿವರಾಗಿಲ್ಲ, ಕೆಪಿಸಿಸಿ ಅಧ್ಯಕ್ಷರೂ ಆಗಿಲ್ಲ. ಈ ಸರಕಾರದಲ್ಲಿ ಯಾವುದೇ ಸ್ಥಾನ ಸಿಗದೆ ಇರುವುದಕ್ಕೆ ಬಂಡಾಯವೆದ್ದಿರಬೇಕು ಎಂದರು.

ಎಚ್.ಕೆ.ಪಾಟೀಲ್ ಯಾಕೆ ಬಂಡಾಯ ಎದ್ದಿದ್ದಾರೆ ಎಂಬುದಕ್ಕೆ ಸ್ಪಷ್ಟಣೆ ನೀಡಬೇಕು. ಅವರು ನಿಜವಾಗಿಯೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಬಗೆಗಿನ ಕಾಳಜಿಯಿಂದ ಈ ಧ್ವನಿ ಎತ್ತಿದ್ದರೆ, ಅವರ ಜೊತೆ ನಾವು ಕೈ ಜೋಡಿಸುತ್ತೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಉತ್ತರ ಕರ್ನಾಟಕ ಭಾಗವನ್ನು ಇದೇ ರೀತಿ ಕಡೆಗಣಿಸುತ್ತಿದ್ದರೆ ಜನರಲ್ಲಿ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುತ್ತದೆ. ಆದುದರಿಂದ, ನಮ್ಮ ಭಾಗಕ್ಕೆ ಆಗಿರುವ ಅನ್ಯಾಯವನ್ನು ಸರಕಾರ ಸರಿಪಡಿಸಬೇಕು. ಬಜೆಟ್ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News