ಫಿಫಾ ವಿಶ್ವಕಪ್: ರಶ್ಯವನ್ನು ಸೋಲಿಸಿದ ಕ್ರೊವೇಶಿಯಾ ಸೆಮಿಫೈನಲ್‌ಗೆ ಲಗ್ಗೆ

Update: 2018-07-08 04:31 GMT

ಸೋಚಿ, ಜು. 8: ಹಲವು ನಾಟಕೀಯ ತಿರುವುಗಳನ್ನು ಕಂಡ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ರಶ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಸೋಲಿಸಿದ ಕ್ರೊವೇಷಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಶನಿವಾರ ನಡೆದ ಪಂದ್ಯದ ಹೆಚ್ಚುವರಿ ಸಮಯ ಬಳಿಕವೂ ಉಭಯ ತಂಡಗಳು 2-2 ಡ್ರಾ ಸಾಧಿಸಿದ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ಗೆ ಮೊರೆ ಹೋಗಬೇಕಾಯಿತು.

ಇವಾನ್ ರಕಿಟಿಕ್ ಅವರು ವಿಜಯದ ಗೋಲು ಹೊಡೆದು ಕ್ರೊವೇಷಿಯಾ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಲು ಕಾರಣರಾದರು. ಸೆಮಿಫೈನಲ್‌ನಲ್ಲಿ ಕ್ರೊವೇಷಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದರೊಂದಿಗೆ ವಿಶ್ವ ರ್ಯಾಂಕಿಂಗ್‌ನಲ್ಲಿ 70ನೇ ಸ್ಥಾನದಲ್ಲಿರುವ ರಶ್ಯದ ಗಮನಾರ್ಹ ಅಭಿಯಾನ ಅಂತ್ಯವಾಯಿತು.

ಫ್ಯೋದರ್ ಸ್ಮೊಲೋವ್ ಹೊಡೆದ ಮೊದಲ ಪೆನಾಲ್ಟಿಯನ್ನು ಕ್ರೊವೇಷಿಯಾ ಗೋಲಿ ಡ್ಯಾನಿಜೆಲ್ ಸುಬಾಸಿಕ್ ತಡೆದರೆ, ಮಟೆವೊ ಕೊವಾಸಿಕ್ ಕಿಕ್ ಅನ್ನು ರಶ್ಯ ಗೋಲ್‌ಕೀಪರ್ ಇಗೋರ್ ಅಕಿನ್‌ಫೀವ್ ಕೂಡಾ ಅದ್ಭುತವಾಗಿ ತಡೆದು ತವರಿನ ಪ್ರೇಕ್ಷಕರ ಹರ್ಷಕ್ಕೆ ಕಾರಣರಾದರು.

ಆದರೆ ರಶ್ಯದ ಸ್ಟಾರ್ ಆಟಗಾರ ಮಾರಿಕೊ ಫೆರ್ನಾಂಡಿಸ್ ಮೂರನೇ ಪ್ರಯತ್ನದಲ್ಲಿ ಚೆಂಡನ್ನು ಸಂಪೂರ್ಣ ವೈಡ್ ಹೊಡೆಯುವ ಮೂಲಕ ರಶ್ಯದ ಗೆಲುವಿನ ಸಾಧ್ಯತೆ ಕ್ಷೀಣಿಸಿತು.

ಹಿಂದಿನ 120 ನಿಮಿಷಗಳ ಆಟದಲ್ಲಿ ದೀರ್ಘ ಅಂತರದ ಥಂಡರ್‌ಬೋಲ್ಟ್ ಹೊಡೆತದ ಮೂಲಕ ಡೆನಿಸ್ ಚೆರಿಶೇವ್ 31ನೇ ನಿಮಿಷದಲ್ಲಿ ಟೂರ್ನಿಯ ನಾಲ್ಕನೇ ಗೋಲು ಸಾಧಿಸಿದರು. ಮಧ್ಯಂತರ ಅವಧಿಗೆ ಆರು ನಿಮಿಷಗಳಿದ್ದಾಗ ಅಂದ್ರೆಜ್ ಕ್ರೆಮಾರಿಕ್ ಸಮಬಲ ಸಾಧಿಸಿದರು. ಹೆಚ್ಚುವರಿ ಅವಧಿಯ 11ನೇ ನಿಮಿಷದಲ್ಲಿ ಹೆಡ್ಡರ್ ಮೂಲಕ ಮುನ್ನಡೆ ಸಾಧಿಸಿತು. ಆದರೆ ಆಟ ಮುಗಿಯಲು ಐದು ನಿಮಿಷ ಇದ್ದಾಗ ಬ್ರೆಝಿಲಿಯನ್ ಸಂಜಾತ ಫೆರ್ನಾಂಡಿಸ್, ಅತಿಥೇಯರು ಸಮಬಲ ಸಾಧಿಸಲು ನೆರವಾದರು.

ಪ್ರಬಲ ಸ್ಪೇನ್ ಸವಾಲನ್ನು ಎದುರಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದ ಅತಿಥೇಯರ ಅಭಿಯಾನ ಪೆನಾಲ್ಟಿ ಶೂಟೌಟ್‌ನಲ್ಲಿ ಅಂತ್ಯವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News