ಚಿಕ್ಕಮಗಳೂರು: ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-07-08 11:36 GMT

ಚಿಕ್ಕಮಗಳೂರು, ಜು.8: ವಿದ್ಯಾರ್ಥಿಗಳು ವಿಜ್ಞಾನದ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಯುವ ವಿಜ್ಞಾನಿಗಳಾಗಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.

ಶನಿವಾರ ನಗರದ ಎಲ್.ಬಿ.ಎಸ್ ಪ್ರೌಢ ಶಾಲೆಯಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡಬೇಕೆಂದು ತಿಳಿಸಿದರು.

ನಮ್ಮ ದೇಶಕ್ಕೆ ಒಂದೇ ನೋಬೆಲ್ ಬಹುಮಾನ ಬಂದಿದೆ. ಯುವ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಗಮನ ನೀಡಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಾಗ ವಿಜ್ಞಾನಿಗಳ ಜೋತೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕು. ನಿಜವಾದ ವಿಜ್ಞಾನದ ವಿದ್ಯಾರ್ಥಿಗಳು ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಲಾರರು, ಪ್ರಶ್ನಿಸುವ ಸಾಮರ್ಥ್ಯವನ್ನು ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ದಿನದಿಂದಲೇ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಜ್ಞಾನ ಯಾರ ಸೊತ್ತು ಅಲ್ಲ. ಕಲಿಯುವವರ ಸೊತ್ತಾಗಿದೆ .ವಿದ್ಯಾರ್ಥಿಗಳು ಸಣ್ಣ ಸಣ್ಣ ಅವಿಷ್ಕಾರಗಳ ಮೂಲಕ ಕಲಿಯಲು ಆರಂಭಿಸಿದರೆ ಹೆಚ್ಚಿನ ಆಸಕ್ತಿ ಬಂದು ದೇಶಕ್ಕೆ ಏನಾದರು ಕೊಡುಗೆ ನೀಡಬಹುದೆಂದರು.

ಈ ಸಂದರ್ಭದಲ್ಲಿ ಕ.ರಾ.ವಿ.ಪ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ನೀಲಕಂಠಪ್ಪ, ಉಪಾಧ್ಯಕ್ಷ ಹೆಚ್.ಎಂ.ಓಂಕಾರಪ್ಪ, ಕಾರ್ಯದರ್ಶಿ ತ್ಯಾಗರಾಜ್, ಖಜಾಂಚಿ ಕೆ.ಜಿ.ನೀಲಕಂಠಪ್ಪ, ಸಹಕಾರ್ಯದರ್ಶಿ ಟಿ.ಜಿ.ಕೃಷ್ಣಮೂರ್ತಿ, ಸತ್ಯನಾರಾಯಣ್, ನಾಗರಾಜ್, ಓಂಕಾರಪ್ಪ, ವಿಷಯ ವಿಜ್ಞಾನ ಪರಿವೀಕ್ಷಕರಾದ ರವೀಶ್, ತೀರ್ಪುಗಾರರಾದ ಮಂಜುನಾಥ್, ವಿಶುಕುಮಾರ್, ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News