ಬೀರೂರು: ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ

Update: 2018-07-08 12:31 GMT

ಬೀರೂರು, ಜು.8: ಯುದ್ದವೊಂದನ್ನೇ ಗುರಿಯಾಗಿಟ್ಟುಕೊಂಡು ಸೇನೆಯಿಂದ ದೂರ ಸರಿಯುವುದು ತಪ್ಪು. ಜೀವನಕ್ಕೆ ಅಳವಡಿಕೆಯಾಗುವಂತಹ ಶಿಸ್ತು, ಸಂಯಮ, ಏಕತೆಯನ್ನು ಮತ್ತು ಮುಖ್ಯವಾಗಿ ದೇಶಸೇವೆಯನ್ನು ಗಣನೆಯಲ್ಲಿಟ್ಟುಕೊಂಡು ಸೇನೆಗೆ ಸೇರಬೇಕಿದೆ ಎಂದು ನಿವೃತ್ತ ಯೋಧ ಕೆ.ಗಿರೀಶ್ ಹೇಳಿದರು.

ಅವರು ಶನಿವಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸ್ವಯಂ ಯೋಜನೆಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರಯೋಧರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. 'ನಾವು ಸೇನೆಗೆ ಸೇರ್ಪಡೆಯಾದಾಗ ಇದ್ದ ತಂತ್ರಜ್ಞಾನಕ್ಕೂ ಈಗ ಇರುವ ತಂತ್ರಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಪಾಕಿಸ್ತಾನ ಮತ್ತು ಚೀನಾ ಎರಡು ದೇಶಗಳೇ ಭಾರತದ ಶತ್ರುಗಳಾಗಿವೆ. ಆದರೆ ಆ ಸೈನಿಕರು ಕೇವಲ ಸಂಬಳಕ್ಕಾಗಿ ಸೇವೆ ಸಲ್ಲಿಸುತ್ತಾರೆ. ನಮ್ಮ ದೇಶದ ಸೈನಿಕರು ದೇಶಾಭಿಮಾನ ಮತ್ತು ಮಣ್ಣಿನ ಋಣಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಇದರಿಂದಲೇ ನಮ್ಮನ್ನು ಅವರು ಗೆಲ್ಲಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಸುಮಾರು 15 ವರ್ಷಗಳು ದೇಶಸೇವೆ ಸಲ್ಲಿಸಿದ್ದಕ್ಕೆ ನನಗೆ ಹೆಮ್ಮೆಯಿದೆ. ದೇಶ ಸೇವೆಯೇ ಹೆತ್ತ ತಾಯಿ ಸೇವೆ ಎಂದರು.

ಮತ್ತೊಬ್ಬ ನಿವೃತ್ತ ಯೋಧ ಗಿರೀಶ್ ಬಿ.ಜಿ ಮಾತನಾಡಿ, ದೇಶ ದೇಶಗಳ ನಡುವೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೆ ಅಂತಹವುಗಳನ್ನು ಪರಿಹರಿಸಿಕೊಳ್ಳಲು ದೇಶದ ಗಡಿಭಾಗಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಶಾಂತಿ ಸಭೆ ನಡೆಸುತ್ತೇವೆ. ರಾಷ್ಟ್ರೀಯತೆ ಎಂಬುದು ನಮ್ಮ ಸೈನಿಕರ ಮನದಾಳದಿಂದ ಬರುತ್ತದೆ. ಆದರೆ ಶತ್ರು ದೇಶದವರಿಗೆ ರಾಷ್ಟ್ರೀಯತೆ ಎಂಬುದೇ ಇಲ್ಲ. ಸೇನೆಗೆ ಸೇರಲು ನಿಮಗೆ ಆತಂಕ ಬೇಡ, ಸೇನೆಯಲ್ಲಿ ಗಡಿ ಕಾಯುವ ಕೆಲಸವಲ್ಲದೆ ಕಚೇರಿ ಕೆಲಸಗಳೂ ಇದೆ. ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕಾರ್ಯವನ್ನು ನಿಗದಿ ಮಾಡುವರು. ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಗಳು ವಿದ್ಯಾರ್ಥಿ ಜೀವನದಲ್ಲಿ ದೇಶಾಭಿಮಾನ ಮೂಡಿಸುವಂತಹ ಸಂಸ್ಥೆಗಳಾಗಿವೆ ಎಂದರು. 

ವಿದ್ಯಾರ್ಥಿ ಪುನೀತ್ ಸ್ವಾಗತಿಸಿ, ಪ್ರಿಯಾ ಪ್ರಾರ್ಥಿಸಿದರು. ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್ ವಂದನಾರ್ಪಣೆ ಮಾಡಿದರು. ಕಾಲೇಜು ಪ್ರಾಂಶುಪಾಲೆ ಐರಿನ್ ಡಿಸೋಜ, ದೈಹಿಕ ಶಿಕ್ಷಕ ಪ್ರಸಾದ್ ಮತ್ತು ವಿದ್ಯಾರ್ಥಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News