ಬಜೆಟ್‌ನಲ್ಲಿ ಕರಾವಳಿ, ಉ.ಕ.ಭಾಗಕ್ಕೆ ಅನ್ಯಾಯ ಆರೋಪ: ವಿಧಾನ ಮಂಡಲದಲ್ಲಿ ಪ್ರತಿಧ್ವನಿಸುವ ಸಾಧ್ಯತೆ

Update: 2018-07-08 11:56 GMT

ಬೆಂಗಳೂರು, ಜು. 8: ಹಣಕಾಸು ಸಚಿವರೂ ಆಗಿರುವ ಸಿಎಂ ಕುಮಾರಸ್ವಾಮಿ ಮಂಡಿಸಿರುವ ಆಯವ್ಯಯದಲ್ಲಿ ಕರಾವಳಿ, ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಆರೋಪಿ ವಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿ ನಾಳೆ (ಜು.9) ಹೋರಾಟ ನಡೆಸುವುದು ನಿಶ್ಚಿತವಾಗಿದೆ.

ಸಾಲಮನ್ನಾ ಘೋಷಣೆ ಮಾಡಿದ್ದರೂ, ಈ ಬಗೆಗಿನ ಗೊಂದಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಮೈತ್ರಿಕೂಟ ಸರಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟು ಸರಕಾರವನ್ನು ತರಾಟೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ, ವಿಪಕ್ಷಕ್ಕೆ ತಕ್ಕ ಉತ್ತರ ನೀಡಲು ಸಿಎಂ ಕುಮಾರಸ್ವಾಮಿ ಸಿದ್ಧ ಎಂದು ಘೋಷಿಸಿದ್ದಾರೆ.

ನಾಳೆ (ಜು.9) ಬೆಳಗ್ಗೆ 10:30ಕ್ಕೆ ವಿಧಾನಸಭೆ ಕಲಾಪ ಆರಂಭಗೊಳ್ಳಲಿದ್ದು, ಜು.2ರಂದು ರಾಜ್ಯಪಾಲರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ನೀಡಲಿದ್ದಾರೆ. ಬಳಿಕ ಪ್ರಶ್ನೋತ್ತರ ಕಲಾಪ ನಡೆಯಲಿದ್ದು, ಅನಂತರ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ ಎಂದು ಕಾರ್ಯಕಲಾಪ ಪಟ್ಟಿಯಲ್ಲಿದೆ. ಆದರೆ, ಚಾಮರಾಜನಗರ ಜಿಲ್ಲೆಯಲ್ಲಿ ಸರಕಾರ ಸಾಲಮನ್ನಾ ಘೋಷಣೆ ಬಳಿಕ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅದೇ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಸನ್ನದ್ಧವಾಗಿದೆ ಎನ್ನಲಾಗಿದೆ.

ತೆರಿಗೆ ಇಳಿಕೆ ಸಾಧ್ಯತೆ: ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಢೀಕರಣಕ್ಕೆ ಏರಿಕೆ ಮಾಡಲಾಗಿದ್ದ ವಿದ್ಯುತ್, ಪೆಟ್ರೋಲ್, ಡೀಸೆಲ್ ದರವನ್ನು ಸಾರ್ವಜನಿಕರ ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಇಳಿಕೆ ಮಾಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News