ರಷ್ಯಾ ಜೊತೆ 5ನೇ ಪೀಳಿಗೆಯ ಯುದ್ಧವಿಮಾನ ಅಭಿವೃದ್ಧಿ ಯೋಜನೆಯ ಪುನರ್‌ಪರಿಶೀಲನೆ

Update: 2018-07-08 15:16 GMT

ಹೊಸದಿಲ್ಲಿ,ಜು.8: ಐದನೇ ಪೀಳಿಗೆಯ ಯುದ್ಧವಿಮಾನದ ಜಂಟಿ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಲು ತಾನು ಒಲವು ಹೊಂದಿಲ್ಲ ಎನ್ನುವುದನ್ನು ಭಾರತವು ರಷ್ಯಾಕ್ಕೆ ತಿಳಿಸಿದೆ. ಯೋಜನೆಯ ಅಧಿಕ ವೆಚ್ಚವನ್ನು ಇದಕ್ಕೆ ಮುಖ್ಯ ಕಾರಣವನ್ನಾಗಿ ಅದು ಬೆಟ್ಟು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ಉಭಯ ದೇಶಗಳ ನಡುವಿನ ಮಾತುಕತೆಗಳನ್ನು ಇನ್ನೂ ಕೈಬಿಡಲಾಗಿಲ್ಲ. ಸೂಕ್ತ ವೆಚ್ಚ ಹಂಚಿಕೆ ಸೂತ್ರವೊಂದನ್ನು ಉಭಯ ದೇಶಗಳು ಒಪ್ಪಿಕೊಂಡರೆ ಯೋಜನೆಯ ಮರುಪರಿಶೀಲನೆಗೆ ಭಾರತವು ಸಿದ್ಧವಿದೆ ಎಂದೂ ಅವು ತಿಳಿಸಿದವು.

2007ರಲ್ಲಿ ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧಗಳನ್ನು ಹೊಸ ಎತ್ತರಕ್ಕೊಯ್ಯಲು ನಿರ್ಧರಿಸಿದ್ದ ಭಾರತ ಮತ್ತು ರಷ್ಯಾ ಜಂಟಿಯಾಗಿ ಯುದ್ಧವಿಮಾನವನ್ನು ರೂಪಿಸುವ ಸುಮಾರು 30 ಶತಕೋಟಿ ಡಾ.(ಎರಡು ಲಕ್ಷ ಕೋ.ರೂ.) ಅಂದಾಜು ವೆಚ್ಚದ ಈ ಬೃಹತ್ ಯೋಜನೆಗಾಗಿ ಅಂತರ್ ಸರಕಾರಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು.

ಆದರೆ ಅಭಿವೃದ್ಧಿ ವೆಚ್ಚ ಹಂಚಿಕೆ,ಅದರಲ್ಲಿ ಬಳಸಬೇಕಾದ ತಂತ್ರಜ್ಞಾನಗಳು ಮತ್ತು ನಿರ್ಮಾಣಗೊಳ್ಳಬೇಕಾದ ವಿಮಾನಗಳ ಸಂಖ್ಯೆ ಕುರಿತು ಉಭಯ ದೇಶಗಳ ನಡುವೆ ತೀವ್ರ ಭಿನಾಭಿಪ್ರಾಯಗಳಿಂದಾಗಿ ಯೋಜನೆಯು ಕಳೆದ 11 ವರ್ಷಗಳಿಂದ ನನೆಗುದಿಯಲ್ಲಿದೆ.

ವೆಚ್ಚ ಹಂಚಿಕೆ ಸೇರಿದಂತೆ ಯೋಜನೆಯ ವಿವಿಧ ಅಂಶಗಳ ಕುರಿತು ನಮ್ಮ ನಿಲುವನ್ನು ರಷ್ಯಾಕ್ಕೆ ತಿಳಿಸಿದ್ದೇವೆ ಮತ್ತು ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಯೋಜನೆಯ ಕುರಿತು ರಷ್ಯಾದೊಂದಿಗೆ ಮಾತುಕತೆಗಳಲ್ಲಿ ಭಾಗಿಯಾಗಿದ್ದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಯುದ್ಧವಿಮಾನದ ಪ್ರಾಥಮಿಕ ವಿನ್ಯಾಸ ರೂಪಿಸಲು 295 ಮಿ.ಡಾ.ಗಳನ್ನು ನೀಡಲು 2010,ಡಿಸೆಂಬರ್‌ನಲ್ಲಿ ಭಾರತವು ಒಪ್ಪಿಕೊಂಡಿತ್ತು. ನಂತರ ಅಂತಿಮ ವಿನ್ಯಾಸ ಮತ್ತು ಮೊದಲ ಹಂತದಲ್ಲಿ ವಿಮಾನ ಉತ್ಪಾದನೆಗೆ ತಲಾ ಆರು ಶತಕೋಟಿ ಡಾ.ಗಳನ್ನು ಪಾವತಿಸಲು ಉಭಯ ದೇಶಗಳು ಉದ್ದೇಶಿಸಿದ್ದವು. ಆದರೆ ಈ ಕುರಿತು ಅಂತಿಮ ಒಪ್ಪಂದಕ್ಕೆ ಬರಲು ಅವುಗಳಿಗೆ ಸಾಧ್ಯವಾಗಿರಲಿಲ್ಲ.

ಯೋಜನೆಯ ಕುರಿತು ನಮ್ಮ ಬಾಗಿಲುಗಳನ್ನು ನಾವಿನ್ನೂ ಮುಚ್ಚಿಲ್ಲ ಎಂದು ಮೂಲಗಳು ತಿಳಿಸಿದವು.

ವಿಮಾನದಲ್ಲಿ ಬಳಸಬೇಕಾದ ತಂತ್ರಜ್ಞಾನಗಳ ಕುರಿತಂತೆ ಸಮಾನ ಹಕ್ಕುಗಳಿಗಾಗಿ ಭಾರತವು ಪಟ್ಟು ಹಿಡಿದಿದೆ,ಆದರೆ ವಿಮಾನದ ಎಲ್ಲ ನಿರ್ಣಾಯಕ ತಂತ್ರಜ್ಞಾನಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ರಷ್ಯಾ ಸಿದ್ಧವಿಲ್ಲ ಎನ್ನಲಾಗಿದೆ.

ಆಗಿನ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಹಸಿರು ನಿಶಾನೆ ತೋರಿಸಿದ ಬಳಿಕ 2016,ಫೆಬ್ರವರಿಯಲ್ಲಿ ಉಭಯ ದೇಶಗಳು ಯೋಜನೆಯ ಕುರಿತು ಮಾತುಕತೆಗಳನ್ನು ಪುನರಾರಂಭಿಸಿದ್ದವು.

ಜಟಿಲ ವಿಷಯಗಳನ್ನು ಬಗೆಹರಿಸಲು ಉಭಯ ದೇಶಗಳು ಪ್ರಯತ್ನಿಸುತ್ತಿವೆ,ಆದರೆ ಯೋಜನೆಯು ಭಾರೀ ವೆಚ್ಚವನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಅದು ಫಲಪ್ರದಗೊಳ್ಳುವ ಬಗ್ಗೆ ಭಾರತವು ಆಶಾವಾದವನ್ನು ಹೊಂದಿಲ್ಲ ಎಂದು ಮೂಲಗಳು ತಿಳಿಸಿದವು.

ಗಮನಾರ್ಹವೆಂದರೆ ಸರಕಾರಿ ಸ್ವಾಮ್ಯದ ಎಚ್‌ಎಎಲ್ ಐದನೇ ಪೀಳಿಗೆಯ ಯುದ್ಧವಿಮಾನಕ್ಕಾಗಿ ಬಲವಾಗಿ ಪ್ರತಿಪಾದಿಸುತ್ತಿದೆ. ಯಾವುದೇ ದೇಶವು ಹಿಂದೆಂದೂ ಭಾರತಕ್ಕೆ ಇಂತಹ ನಿರ್ಣಾಯಕ ತಂತ್ರಜ್ಞಾನಗಳನ್ನು ಒದಗಿಸಿರದ ಹಿನ್ನೆಲೆಯಲ್ಲಿ ಈ ಯೋಜನೆಯು ಭಾರತೀಯ ವೈಮಾನಿಕ ಕ್ಷೇತ್ರವನ್ನು ಉತ್ತೇಜಿಸಲು ಮಹತ್ವದ ಅವಕಾಶವನ್ನು ನೀಡುತ್ತದೆ ಎನ್ನುವುದು ಅದರ ಅಭಿಪ್ರಾಯವಾಗಿದೆ.

ಭಾರೀ ವೆಚ್ಚದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಯೋಜನೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News