ರೈತರಲ್ಲಿ ಹರ್ಷ ತಂದ ಮುಂಗಾರು: ಕೊಡಗಿನಲ್ಲಿ ಕೃಷಿ ಚಟುವಟಿಕೆ ಚುರುಕು

Update: 2018-07-08 17:11 GMT

ಮಡಿಕೇರಿ, ಜು.8: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತ ವರ್ಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಪ್ರಸ್ತುತ ಒಟ್ಟು 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ.

ಮಡಿಕೇರಿ ತಾಲೂಕಿನಲ್ಲಿ 6,500, ಸೋಮವಾರಪೇಟೆಯಲ್ಲಿ 10,000 ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಒಟ್ಟು 14,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. 30,500 ಹೆಕ್ಟೇರ್ ಪ್ರದೇಶದ ಪೈಕಿ ಕೇವಲ 2,400 ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿ ವ್ಯಾಪ್ತಿಗೆ ಒಳಪಡಲಿದ್ದು, ಉಳಿದ ಪ್ರದೇಶಗಳಲ್ಲಿ ರೈತರು ಮಳೆಯನ್ನು ನಂಬಿಕೊಂಡೇ ಭತ್ತದ ಕೃಷಿ ಕೈಗೊಂಡಿದ್ದಾರೆ.

ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗುತ್ತಿದ್ದು, ರೈತರು ಕೃಷಿ ಕಾರ್ಯಗಳ ಕಡೆ ಗಮನ ಹರಿಸಿದ್ದಾರೆ. ಕೊಡುಗು ಜಿಲ್ಲೆಗೆ ವಾಡಿಕೆ ಮಳೆ 850 ಮಿ.ಮಿ.ಗಳಾಗಿದ್ದು, 2018ರ ಜನವರಿಯಿಂದ ಜೂನ್ ಅಂತ್ಯದವರೆಗೆ ಒಟ್ಟು 1204 ಮಿ.ಮಿ.ಮಳೆಯಾಗಿದೆ. ಅತೀ ಹೆಚ್ಚು ಮಳೆಯಾಗುವ ಬ್ರಹ್ಮಗಿರಿ ಶ್ರೇಣಿ ಮತ್ತು ಪುಷ್ಪಗಿರಿ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಕಾರ್ಯ ಚುರುಕುಗೊಂಡಿದೆ. ಸೂರ್ಲಬಿ, ಹಚ್ಚಿನಾಡು, ಕುಂಬಾರಗಡಿಗೆ, ಹಮ್ಮಿಯಾಲ, ಕೋರಂಗಾಲ, ಚೆಟ್ಟಿಮಾನಿ ವ್ಯಾಪ್ತಿಯಲ್ಲಿ ಜೂನ್ 3ನೇ ವಾರದಲ್ಲೇ ಭತ್ತದ ಸಸಿ ಮಡಿಗಳ ಸಿದ್ಧಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಕಡೆಗಳಲ್ಲಿ ರೈತರು ಈಗಾಗಲೇ ಭತ್ತದ ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ. ಕುಶಾಲನಗರ, ಸೋಮವಾರಪೇಟೆಯ ಬಯಲು ಪ್ರದೇಶಗಳಲ್ಲಿ ಒಟ್ಟು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಬಗ್ಗೆ ಕೃಷಿ ಇಲಾಖೆ ಸರ್ವೇ ನಡೆಸಿದ್ದು, ಈ ಪೈಕಿ 1,545 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಭಿತ್ತನೆ ಕಾರ್ಯ ಪೂರ್ಣಗೊಂಡಿದೆ.

ರೈತರ ಕೃಷಿ ವಲಯವನ್ನು ಆಧಾರವಾಗಿಟ್ಟುಕೊಂಡು ಕೃಷಿ ಇಲಾಖೆ ಭಿತ್ತನೆ ಬೀಜ ಮತ್ತು ಗೊಬ್ಬರವನ್ನು ಕೂಡ ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಮಾಡಿಕೊಂಡಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿವಿಧ  ತಳಿಯ ಒಟ್ಟು 1,800 ಕ್ವಿಂಟಾಲ್ ಭತ್ತದ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಅದರೊಂದಿಗೆ ಯೂರಿಯಾ, ಡಿ.ಓ.ಪಿ, ಎಂ.ಓ.ಪಿ, ಸೇರಿದಂತೆ ಪೋಷಕಾಂಶ ಯುಕ್ತ ಒಟ್ಟು 10,700 ಮೆಟ್ರಿಕ್ ಟನ್ ಗೊಬ್ಬರವನ್ನು ಸಹಕಾರ ಸಂಘ ಸೇರಿದಂತೆ ಖಾಸಗಿ ಗೊಬ್ಬರ ವಿತರಕರು ಕೂಡ ದಾಸ್ತಾನು ಮಾಡಿಕೊಂಡಿದ್ದಾರೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು 110 ರಿಂದ 130 ದಿನಗಳಲ್ಲಿ ಫಸಲು ಬರುವ ತುಂಗಾ ತಳಿಯ ಭತ್ತ ಬೆಳೆಯುತ್ತಿದ್ದು, ಅದರೊಂದಿಗೆ  ನೆರೆಯ ಕೇರಳ ರಾಜ್ಯ, ದಕ್ಷಿಣ ಕನ್ನಡ ಕಡೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆಯಿರುವ ಅಥಿರಾ ಎಂಬ ಕೆಂಪು ಬಣ್ಣದ ಭತ್ತ ಬೆಳೆಯುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ದಕ್ಷಿಣ ಕೊಡಗಿನ ಹಲವು ರೈತರು ಅಥಿರಾ ಬೆಳೆಯ ಕಡೆ ಆಕರ್ಷಿತರಾಗಿದ್ದಾರೆ. ಅದರೊಂದಿಗೆ ತುಂಗಾ ಐ.ಯು.ಟಿ-13905, ಇಂಟಾನ್-ಎಂ.ಟಿ.ಯು, ಬಿ.ಆರ್-2655, ಸೇರಿದಂತೆ ಜೀರಿಗೆಸಣ್ಣ, ರಾಜಮುಡಿ ಹಾಗೂ ಕೆಲವು ರೈತರು ಬಾಸ್ಮತಿ ತಳಿಯ ಭತ್ತ ಬೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೊಡಗಿನ ಸಾಂಪ್ರದಾಯಿಕ ತಳಿ ಎಂದೇ ಕರೆಯಲ್ಪಡುವ, ರೋಗ ನಿರೋಧಕ ಶಕ್ತಿ ಹೊಂದಿರುವ ಬಿ.ಕೆ.ಬಿ. ತಳಿಯನ್ನೇ ಕೆಲವು ರೈತರು ನೆಚ್ಚಿಕೊಂಡಿದ್ದಾರೆ.

ಭತ್ತದ ಕೃಷಿಯಲ್ಲಿ ನಿರಾಸಕ್ತಿ

ಇನ್ನು ಭತ್ತದ ಕೃಷಿ ಇತರ ಬೆಳೆಗಳಂತಲ್ಲ. ಭತ್ತದ ಕೃಷಿಗೆ ಅಧಿಕ ಶ್ರಮದೊಂದಿಗೆ ಅಗತ್ಯ ಪೋಷಣೆಯ ಅವಶ್ಯಕತೆಯೂ ಇದೆ. ಮಳೆಗಾಲ ಪ್ರಾರಂಭವಾದ ಕ್ಷಣದಿಂದ ಬೆಳೆದ ಭತ್ತವನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರುವವರೆಗೂ ರೈತರು ಶ್ರಮಪಡಲೇಬೇಕು. ಹವಾಮಾನ ವೈಪರೀತ್ಯ, ರೋಗಬಾಧೆ, ಕಾಡು ಪ್ರಾಣಿಗಳ ಹಾವಳಿ, ಕಾರ್ಮಿಕರ ಕೊರತೆ  ಹೀಗೆ ಎಲ್ಲಾ ಸಮಸ್ಯೆಗಳನ್ನು ರೈತ ಎದುರಿಸಬೇಕು. ಸಮಸ್ಯೆಗಳಿಂದ ಪಾರಾಗಿ ಹೊರ ಬಂದರೂ, ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೆಂಬಲ ಬೆಲೆ ದೊರೆಯುವ ನಿರೀಕ್ಷೆ ರೈತನಿಗಿಲ್ಲ. ಈ ಕಾರಣದಿಂದಲೆ ಕೊಡಗು ಜಿಲ್ಲೆಯಲ್ಲಿ ಹಲವು ರೈತರು ಭತ್ತದ ಕೃಷಿ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಭತ್ತದ ಗದ್ದೆಗಳು ಪಾಳು ಬೀಳುತ್ತಿದ್ದು, ಕೆಲವು ಗದ್ದೆಗಳು ನಿವೇಶನಗಳಾಗಿ ಪರಿವರ್ತನೆಯಾದರೆ ಮತ್ತೆ ಕೆಲವೆಡೆ ಕಾಡಾನೆಗಳ ‘ಕಾರಿಡಾರ್’ ಆಗಿ ಪಾಳು ಬಿದ್ದಿವೆ.

ಕೊಡಗು ಜಿಲ್ಲೆ ಭೌಗೋಳಿಕವಾಗಿ ಬೆಟ್ಟ-ಗುಡ್ಡಗಳಿಂದ ಕೂಡಿರುವುದಲ್ಲದೆ, ಭೂಮಿಯ ಫಲವತ್ತತೆಯಲ್ಲೂ ವ್ಯತ್ಯಾಸಗಳಿದೆ. ಕೆಲವೆಡೆ ಎಕರೆಗೆ 10 ಕ್ಟಿಂಟಾಲ್ ಭತ್ತ ಬೆಳೆಯಲ್ಪಟ್ಟರೆ, ಮತ್ತೆ ಕೆಲವೆಡೆ 20 ರಿಂದ 30 ಕ್ಟಿಂಟಾಲ್ ಭತ್ತ ಬೆಳೆಯಲಾಗುತ್ತದೆ. ಭತ್ತದ ಬೆಳೆಯ ನಿರ್ವಹಣೆ, ಪೋಷಣೆ ಕೂಡ ಭತ್ತದ ಇಳುವರಿಯನ್ನು ನಿರ್ಧರಿಸುತ್ತದೆ ಎಂದು ಕೊಡಗು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಮಾಹಿತಿ ನೀಡಿದ್ದಾರೆ. 

ಕೃಷಿ ಫಸಲು ನಷ್ಟದಿಂದ ರೈತರು ಪಾರಾಗಲು, ಎಲ್ಲಾ ರೈತರು ಕೃಷಿ ಫಸಲು ವಿಮೆಯನ್ನು ಮಾಡಿಸಿಕೊಳ್ಳಬೇಕು. ಇದರಿಂದ ಕೃಷಿ ನಷ್ಟದಿಂದ ಸ್ವಲ್ಪಮಟ್ಟಿಗಾದರೂ ಪಾರಾಗಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News