ನನ್ನನ್ನು ಭಾರತಕ್ಕೆ ಕರೆ ತಂದು ಮತ ಗಳಿಸಲು ಸರಕಾರ ಬಯಸಿದೆ ಎಂದ ವಿಜಯ್ ಮಲ್ಯ

Update: 2018-07-09 07:08 GMT

ಲಂಡನ್, ಜು.9: ಇಂಗ್ಲೆಂಡ್ ನಲ್ಲಿರುವ ತನ್ನ ಆಸ್ತಿಯನ್ನು ಜಪ್ತಿ ನಡೆಸಲಿರುವ ನ್ಯಾಯಾಲಯದ ಜಾರಿ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಬಾಕಿಯಿರಿಸಿ ಲಂಡನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. ಆದರೆ ಇಂಗ್ಲೆಂಡ್ ನಲ್ಲಿರುವ ಐಷಾರಾಮಿ ನಿವಾಸವೊಂದು ಅವರ ಮಕ್ಕಳ ಹೆಸರಿನಲ್ಲಿದ್ದರೆ ಲಂಡನ್ ನಿವಾಸ ಅವರ ತಾಯಿಯ ಹೆಸರಿನಲ್ಲಿದ್ದು, ಅವುಗಳನ್ನು ಮುಟ್ಟುಗೋಲು ಹಾಕಲು ಸಾಧ್ಯವಿಲ್ಲ ಎನ್ನಲಾಗಿದೆ.

ಬ್ರಿಟಿಷ್  ಫಾರ್ಮುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಫೋರ್ಸ್ ಇಂಡಿಯಾ ಟೀಮ್ ಮಾಲಕರಾಗಿರುವ ಮಲ್ಯ ರಾಯಿಟರ್ಸ್ ಜೊತೆ ಮಾತನಾಡಿದ್ದು, "ಕೆಲವೊಂದು ಕಾರುಗಳು, ಚಿನ್ನಾಭರಣಗಳಿವೆ, ಅವುಗಳನ್ನು ನಾನೇ ಅವರಿಗೆ ನೀಡುತ್ತೇನೆ. ಆದರೆ ನಿರ್ಗತಿಕನಾಗುವ ಪ್ರಶ್ನೆಯೇ ಇಲ್ಲ. ದಿನದ ಅಂತ್ಯಕ್ಕೆ ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಮಾತ್ರ ಅವರು ವಶಪಡಿಸಿಕೊಳ್ಳಬಹುದು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲು ಸಾಧ್ಯವಿಲ್ಲ'' ಎಂದಿದ್ದಾರೆ.

ಮಾರ್ಚ್ 2016ರಲ್ಲಿ ಭಾರತ ಬಿಟ್ಟು ತೆರಳಿದಂದಿನಿಂದ ಇಂಗ್ಲೆಂಡ್ ನಲ್ಲಿರುವ ಮಲ್ಯರ ಪಾಸ್ ಪೋರ್ಟ್ ರದ್ದುಪಡಿಸಲಾಗಿರುವುದರಿಂದ ಅವರು ಬೇರೆ ದೇಶಕ್ಕೆ ತೆರಳುವ ಹಾಗಿಲ್ಲ. ಮಲ್ಯರನ್ನು ಭಾರತದ ಜಾರಿ ನಿರ್ದೇಶನಾಲಯ ಆರ್ಥಿಕ  ಅಪರಾಧಿ ಎಂದು ಘೋಷಿಸಿ ಅವರಿಂದ ರೂ 12,500 ಕೋಟಿ ಮೌಲ್ಯದ ಸಂಪತ್ತನ್ನು ವಶಪಡಿಸಲು ನಿರ್ಧರಿಸಿದೆ.

"ನಾನು 2 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಕರ್ನಾಟಕ ಹೈಕೋರ್ಟಿನ ಮುಂದಿರಿಸಿದ್ದೇನೆ. ಇದೇ ಬ್ಯಾಂಕ್ ಸಾಲವನ್ನು ತೀರಿಸಲು ಸಾಕಾಗುವುದು. ಹೀಗಿರುವಾಗ ಇಂಗ್ಲೆಂಡ್ ನಲ್ಲಿ ಅಥವಾ ಇನ್ನೆಲ್ಲಿಯಾದರೂ ಆಸ್ತಿ ಮುಟ್ಟುಗೋಲು ಹಾಕುವ ಪ್ರಮೇಯ ಎದುರಾಗದು'' ಎಂದು ಮಲ್ಯ ಹೇಳಿದ್ದಾರೆ.

``ನಾನು ಯಾವತ್ತೂ ಇಂಗ್ಲೆಂಡ್ ನಿವಾಸಿ ಹಾಗೂ ಅನಿವಾಸಿ ಭಾರತೀಯ. ಆದುದರಿಂದ ನಾನು ಮತ್ತೆಲ್ಲಿ ಹೋಗಬಹುದು?  ಚುನಾವಣಾ ವರ್ಷದಲ್ಲಿ ಅವರು ನನ್ನನ್ನು ವಾಪಸ್ ಕರೆಸಿ ಶಿಲುಬೆಯಲ್ಲಿ ನೇತಾಡಿಸಿ ಹೆಚ್ಚಿನ ಮತ ಗಳಿಸುವ ಉದ್ದೇಶ ಹೊಂದಿದ್ದಾರೆ,'' ಎಂದು ಮಲ್ಯ ಹೇಳಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News