ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Update: 2018-07-09 14:59 GMT

ಹೊಸದಿಲ್ಲಿ,ಜು.9: 2012ರ ಡಿಸೆಂಬರ್‌ನಲ್ಲಿ ಇಡೀ ದೇಶವನ್ನೇ ಆಘಾತದಲ್ಲಿ ತಳ್ಳಿದ್ದ ದಿಲ್ಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮೂವರು ಅಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕಾಯಂಗೊಳಿಸಿದೆ.

ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಮತ್ತು ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸುವಂತೆ ಈ ಪಾತಕಿಗಳು ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು ತನ್ನ ಹಿಂದಿನ ತೀರ್ಪನ್ನು ದೃಢಪಡಿಸಿದೆ. ರಾಷ್ಟ್ರಪತಿಗಳಿಗೆ ದಯಾಭಿಕ್ಷೆ ಅರ್ಜಿಯನ್ನು ಸಲ್ಲಿಸುವುದು ಈಗ ಅಪರಾಧಿಗಳಿಗೆ ಇರುವ ಅಂತಿಮ ಅವಕಾಶವಾಗಿದೆ.

ಮುಕೇಶ್(29),ಪವನ್ ಗುಪ್ತಾ(22) ಮತ್ತು ವಿನಯ್ ಶರ್ಮಾ(23) ಅವರು ಸಲ್ಲಿಸಿದ್ದ ಪುನರ್‌ಪರಿಶೀಲನೆ ಅರ್ಜಿ ಕುರಿತಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ‘ನಮ್ಮ ಆದೇಶದ ಮರುಪರಿಶೀಲನೆಯನ್ನು ಅಗತ್ಯವಾಗಿಸುವ ಯಾವುದೇ ಹೊಸ ವಿಷಯಗಳಿಲ್ಲ’ ಎಂದು ಸ್ಪಷ್ಟಪಡಿಸಿತು.

ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ಕನೇ ಅಪರಾಧಿ ಅಕ್ಷಯ್ ಕುಮಾರ ಸಿಂಗ್(31) ್ಧಪುನರ್‌ಪರಿಶೀಲನೆ ಅರ್ಜಿಯನ್ನು ಸಲ್ಲಿಸಿರಲಿಲ್ಲ.

ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ ನಿರ್ಭಯಾಳ ತಾಯಿ,‘ನಮಗೆ ನ್ಯಾಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ನಂಬಿಕೆ ಇದೆ ’ಎಂದು ಹೇಳಿದರು.

ವಿಚಾರಣಾ ನ್ಯಾಯಾಲಯ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯ ಈ ನಾಲ್ವರೂ ಅಪರಾಧಿಗಳಿಗೆ ವಿಧಿಸಿದ್ದ ಗಲ್ಲುಶಿಕ್ಷೆಗಳನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಮೇ ತಿಂಗಳಿನಲ್ಲಿ ಎತ್ತಿಹಿಡಿದಿತ್ತು.

ಈ ಅಪರಾಧದ ಕ್ರೂರ,ಬರ್ಬರ ಮತ್ತು ಪೈಶಾಚಿಕ ಸ್ವರೂಪವು ನಾಗರಿಕ ಸಮಾಜವನ್ನು ನಾಶಗೊಳಿಸಲು ಆಘಾತಗಳ ಸುನಾಮಿಯನ್ನೇ ಸೃಷ್ಟಿಸಬಲ್ಲದು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು.

ತಮಗೆ ವಿಧಿಸಿರುವ ಮರಣ ದಂಡನೆಯು ನ್ಯಾಯದ ಹೆಸರಿನಲ್ಲಿ ನಡೆಯುವ ಕ್ರೂರ ಹತ್ಯೆಗಳಾಗಲಿವೆ ಎಂದು ಬಣ್ಣಿಸಿದ್ದ ಅಪರಾಧಿಗಳು ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದು,ಅದು ಕಳೆದ ವರ್ಷದ ನವಂಬರ್‌ನಲ್ಲಿ ವಿಚಾರಣೆ ನಡೆಸಲು ಒಪ್ಪಿಕೊಂಡಿತ್ತು.

2012,ಡಿ.16ರಂದು ರಾತ್ರಿ ಚಲಿಸುತ್ತಿದ್ದ ಬಸ್ಸಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವು ರಾಷ್ಟ್ರಾದ್ಯಂತ ಆಘಾತ ಮತ್ತು ಆಕ್ರೋಶದ ಅಲೆಗಳನ್ನೇ ಸೃಷ್ಟಿಸಿತ್ತು ಮತ್ತು ಮಹಿಳೆಯರ ವಿರುದ್ಧ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಭಾರೀ ಬದಲಾವಣೆಗಳಿಗೆ ನಾಂದಿ ಹಾಡಿತ್ತು. ಡಿ.29ರಂದು ನಿರ್ಭಯಾ ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಒಟ್ಟು ಆರು ಆರೋಪಿಗಳ ಪೈಕಿ ಬಸ್ ಚಾಲಕ ರಾಮಸಿಂಗ್ ತನ್ನ ಜೈಲುಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿಯನ್ನು ರಿಮಾಂಡ್ ಹೋಮ್‌ಗೆ ರವಾನಿಸಲಾಗಿದ್ದು,ಮೂರೂವರೆ ವರ್ಷಗಳ ಬಳಿಕ ಆತನನ್ನು ಬಿಡುಗಡೆಗೊಳಿಸಲಾಗಿದ್ದು,ಈಗ ಸರಕಾರೇತರ ಸಂಸ್ಥೆಯೊಂದು ಆತನ ಉಸ್ತುವಾರಿ ವಹಿಸಿದೆ.

ಎಲ್ಲರಿಗೂ ನ್ಯಾಯ ದೊರಕಿದೆ:ನಿರ್ಭಯಾ ತಾಯಿ

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ನಿರ್ಭಯಾಳ ತಾಯಿ ಆಶಾದೇವಿ ಅವರು,ಎಲ್ಲರಿಗೂ ನ್ಯಾಯ ದೊರಕಿದೆ ಎಂದು ಹೇಳಿದರು. ಮರಣ ದಂಡನೆ ಜಾರಿಗೊಳ್ಳುವ ಮುನ್ನ ನಡೆಯಬೇಕಿರುವ ಕಾನೂನು ಕ್ರಮಗಳನ್ನು ಪ್ರಸ್ತಾಪಿಸಿದ ಅವರು,ಹೋರಾಟ ಇಲ್ಲಿಗೇ ಮುಗಿದಿಲ್ಲ ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ನೇತೃತ್ವದ ಪೀಠವು ತನ್ನ ತೀರ್ಪು ಪ್ರಕಟಿಸಿದಾಗ ಆಶಾದೇವಿ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

ಅಪರಾಧಿಗಳು ತಮ್ಮ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಇನ್ನೂ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಅದು ತಿರಸ್ಕೃತಗೊಂಡರೆ ರಾಷ್ಟ್ರಪತಿಗಳಲ್ಲಿ ದಯಾಭಿಕ್ಷೆಯನ್ನು ಕೋರಬಹುದು.ರಾಷ್ಟ್ರಪತಿಗಳು ನಿರಾಕರಿಸಿದರೆ ಮರಣ ದಂಡನೆಯು ಜಾರಿಗೊಳ್ಳುತ್ತದೆ.

ಬಾಲಾಪರಾಧಿ ಸೇರಿದಂತೆ ಎಲ್ಲ ತಪ್ಪಿತಸ್ಥರನ್ನು ಶೀಘ್ರವೇ ಗಲ್ಲಿಗೇರಿಸುವಂತೆ ಈ ಹಿಂದೆ ಪದೇ ಪದೇ ಆಗ್ರಹಿಸಿದ್ದ ಆಶಾದೇವಿ,ನ್ಯಾಯದಾನವು ವಿಳಂಬಗೊಳ್ಳುತ್ತಿದೆ ಮತ್ತು ಇದು ಸಮಾಜದಲ್ಲಿಯ ಇತರ ಪುತ್ರಿಯರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುತ್ತಿದೆ. ತಮ್ಮ ನ್ಯಾಯದಾನ ವ್ಯವಸ್ಥೆಯನ್ನು ಬಿಗುಗೊಳಿಸುವಂತೆ ಮತ್ತು ಅಪರಾಧಿಗಳನ್ನು ಸಾಧ್ಯವಾದಷ್ಟು ಶೀಘ್ರ ಗಲ್ಲಿಗೇರಿಸಿ ನಿರ್ಭಯಾಗೆ ನ್ಯಾಯವನ್ನು ಒದಗಿಸುವಂತೆ ಮತ್ತು ಇತರರಿಗೆೆ ನೆರವಾಗುವಂತೆ ತಾನು ನ್ಯಾಯಾಂಗವನ್ನು ಕೋರುತ್ತೇನೆ ಎಂದರು.

ಇದಕ್ಕೆ ಒತ್ತು ನೀಡಿದ ನಿರ್ಭಯಾಳ ತಂದೆ ಬದ್ರಿನಾಥ ಸಿಂಗ್ ಅವರು, ಪುನರ್‌ಪರಿಶೀಲನೆ ಅರ್ಜಿ ತಿರಸ್ಕೃತಗೊಳ್ಳುತ್ತದೆ ಎನ್ನುವುದು ನಮಗೆ ಗೊತ್ತಿತ್ತು. ಆದರೆ ಮುಂದೇನು? ಈಗಾಗಲೇ ಬಹಳಷ್ಟು ಸಮಯವು ಕಳೆದುಹೋಗಿದೆ ಮತ್ತು ಈ ಅವಧಿಯಲ್ಲಿ ಮಹಿಳೆಯರಿಗೆ ಬೆದರಿಕೆಗಳು ಹೆಚ್ಚುತ್ತಲೇ ಇವೆ. ಅವರನ್ನು ಎಷ್ಟು ಬೇಗ ಗಲ್ಲಿಗೇರಿಸಲಾಗುತ್ತದೆಯೋ ಅಷ್ಟು ಒಳ್ಳೆಯದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News