ಯುಜಿಸಿಗೊಂದು ಶೋಕಗೀತೆ

Update: 2018-07-09 18:42 GMT

ಹಣಕಾಸು ಬದ್ಧತೆಗಳು ಹಾಗೂ ವಿಶ್ವವಿದ್ಯಲಯಗಳ, ಕಾಲೇಜುಗಳ ಮತ್ತು ಸಂಶೋಧನಾ ಸಂಸ್ಥೆಗಳ ಉಸ್ತುವಾರಿಯ ನಿಟ್ಟಿನಲ್ಲಿ ಯುಜಿಸಿ ನಿಜವಾಗಿಯೂ ಕೇಂದ್ರ ಸರಕಾರಕ್ಕೆ ಒಂದು ‘ಹೊರೆ’ಯಾಗಿ ಪರಿಣಮಿಸಿದೆ. ಇದೀಗ ಅದರ ರದ್ದತಿಯೊಂದಿಗೆ ಉನ್ನತ ಶಿಕ್ಷಣದ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ಕೈಗೆ ತೆಗೆದುಕೊಳ್ಳುತ್ತದೆ. ಪರಿಣಾಮವಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಭಾರತದ ಉನ್ನತ ಶಿಕ್ಷಣ ಆಯೋಗಕ್ಕೆ ಕೇವಲ ಸಲಹೆ ನೀಡುವ, ಶಿಫಾರಸುಗಳನ್ನು ಮಾಡುವ ಕೆಲಸ ಮಾತ್ರ ಇರುತ್ತದೆ, ವಿಶೇಷವಾಗಿ ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ. ಇದು ದೇಶದ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವುಗಳು ತಾವು ನಡೆಸುವ ಕೋರ್ಸ್‌ಗಳನ್ನು ಮುಂದುವರಿಸಲು ಹಾಗೂ ಶಿಕ್ಷಕರಿಗೆ ವೇತನ ನೀಡಲು ಹಣಕಾಸು ಸಂಗ್ರಹ ಮಾಡಲೇಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ.


ಮೋದಿ ಸರಕಾರದ ಮೊದಲ ವರ್ಷ ರಾಷ್ಟ್ರೀಯ ಮಹತ್ವದ ಒಂದು ಸಂಸ್ಥೆಯ -ಭಾರತದ ಯೋಜನಾ ಆಯೋಗದ-ದಫನದಿಂದ ಜನಮನ ಸೆಳೆದರೆ, ಅದರ ಕೊನೆಯ ವರ್ಷ ರಾಷ್ಟ್ರೀಯ ಮಹತ್ವದ ಇನ್ನೊಂದು ಸಂಸ್ಥೆ-ಯುಜಿಸಿಯ ಅಂತ್ಯ ಸಂಸ್ಕಾರದಿಂದ ಕೊನೆಗೊಳ್ಳುತ್ತಿದೆ. ಯೋಜನಾ ಆಯೋಗದ ಸ್ಥಾನದಲ್ಲಿ ನೀತಿ (ಎನ್‌ಐಟಿಐ) ಆಯೋಗ ಬಂದು ಕುಳಿತುಕೊಂಡಿದ್ದರೆ ಈಗ ಯುಜಿಸಿಯ ಸ್ಥಾನದಲ್ಲಿ ಭಾರತ ಉನ್ನತ ಶಿಕ್ಷಣ ಆಯೋಗ ಕುಳಿತುಕೊಳ್ಳಲಿದೆ.

 ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಚ್‌ಆರ್‌ಡಿ) ಪ್ರಕಾರ ಈ ಬದಲಾವಣೆಯ ಮುಖ್ಯತತ್ವಗಳಲ್ಲಿ ಒಂದು ಸರಕಾರಿ ನಿಯಂತ್ರಣದ ವ್ಯಾಪ್ತಿಯನ್ನು ಕಡಿಮೆ ಮಾಡುವುದು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸದೇ ಇರುವುದು. ಅದೇ ವೇಳೆ ವಿಶ್ವವಿದ್ಯಾನಿಲಯಗಳಿಗೆ ‘‘ಅನುದಾನ ನೀಡುವ ಕೆಲಸವನ್ನು ಎಚ್‌ಆರ್‌ಡಿ ಸಚಿವಾಲಯ ಮಾಡುತ್ತದೆ ಮತ್ತು ಎಚ್‌ಇಸಿಐ ಶೈಕ್ಷಣಿಕ ವಿಷಯಗಳ ಮೇಲೆ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ.’’

ಹೀಗೆ, ಸರಕಾರದ ಹೊಸ ಕಾಯ್ದೆಯು ಅನುದಾನ ಹಂಚಿಕೆಯ ಕಾರ್ಯವನ್ನು ಸರಕಾರದ ಸರ್ವ ಸ್ವಾಮ್ಯಕ್ಕೆ ಒಳಪಡಿಸಿ ದೇಶಾದ್ಯಂತ ಇರುವ ಕಾಲೇಜುಗಳು ಹಾಗೂ ವಿವಿಗಳ ಮೇಲೆ ನಿಯಂತ್ರಣ ಸಾಧಿಸಲು ಸರಕಾರಕ್ಕೆ ನೆರವಾಗುತ್ತದೆ. ಒಟ್ಟಿನಲ್ಲಿ, ಯುಜಿಸಿಯನ್ನು ರದ್ದುಪಡಿಸುವುದರ ಹಿಂದಿರುವ ಉದ್ದೇಶ ಸ್ಪಷ್ಟವೇ ಇದೆ: ಉನ್ನತ ಶಿಕ್ಷಣಕ್ಕೆ ಸರಕಾರ ನೀಡುವ ಆರ್ಥಿಕ ನೆರವನ್ನು, ಹಣಕಾಸು ಅನುದಾನವನ್ನು ಕಡಿತಗೊಳಿಸಿ ಜ್ಞಾನ ಅರ್ಥವ್ಯವಸ್ಥೆಯ ಬೆಳೆಯ ಕಟಾವನ್ನು ಕೊಯ್ಯಲು ಕಾರ್ಪೊರೇಟ್ ಖಾಸಗಿ ರಂಗಕ್ಕೆ ಬಾಗಿಲನ್ನು ಪೂರ್ಣವಾಗಿ ತೆರೆದಿಡುವುದು.

ಹೊಸತಾಗಿ ಅಸ್ತಿತ್ವಕ್ಕೆ ಬರಲಿರುವ ಎಚ್‌ಇಸಿಐಯ ಹನ್ನೆರಡು ಮಂದಿ ಸದಸ್ಯರಲ್ಲಿ ‘ಉದ್ಯಮ ರಂಗದ ತಜ್ಞ’ರೊಬ್ಬರು ಕೂಡ ಓರ್ವ ಸದಸ್ಯರಾಗಿರುತ್ತಾರೆಂಬುದು ಗಮನಾರ್ಹ. ಅಂದರೆ ಎಚ್‌ಇಸಿಐ ಸಂಪೂರ್ಣವಾಗಿ ಸರಕಾರದ ಪ್ರತಿನಿಧಿಗಳು ಮತ್ತು ಅದರ ‘ಹೌದಣ್ಣ’ಗಳ ಪ್ರಾಬಲ್ಯದಲ್ಲಿರುತ್ತದೆ. ಕಾಯ್ದೆ 13(1)ನೇ ನಿಯಮದ ಪ್ರಕಾರ ಹೊಸ ಆಯೋಗವು ಕಾಯ್ದೆಯ ಯಾವುದೇ ನಿಯಮ ಅನುಷ್ಠಾನಕ್ಕೆ ಅಗತ್ಯವೆಂದು ಕೊಂಡ ಯಾವುದೇ ವ್ಯಕ್ತಿಯ ಜೊತೆ ವ್ಯವಹರಿಸಬಹುದು ಆಯೋಗವು ಆಹ್ವಾನಿಸುವ ಈ ವ್ಯಕ್ತಿಗಳು ಯಾರಿರಬಹುದು? ಇಂತಹ ಒಂದು ಸಂಸ್ಥೆಯಲ್ಲಿ ಅವರು ವಹಿಸಬಹುದಾದ ಪಾತ್ರ ಯಾವ ರೀತಿಯದ್ದು ? ‘‘ಅರ್ಹತೆ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆ’’ ಎಂಬ ನೆಲೆಯಲ್ಲಿ ನೋಡಿದರೆ ಆಯೋಗವು ಕಾರ್ಪೊರೇಟ್ ಸಂಸ್ಕೃತಿಗೆ ಕೆಂಪು ಕಂಬಳಿ ಸ್ವಾಗತ ಬಯಸಲಿದೆ.

ಉನ್ನತ ಶಿಕ್ಷಣದಿಂದ ಹಿಂದೆ ಸರಿಯುವ ಕಾರ್ಪೊರೇಟ್ ರಂಗಕ್ಕೆ ಹೆಚ್ಚು ಮಹತ್ವ ನೀಡಿರುವ ಸರಕಾರದ ಸದ್ಯದ ಪ್ರಸ್ತಾಪವು 1980ರ ದಶಕದಿಂದ ತೆಗೆದುಕೊಳ್ಳಲಾದ ಹಲವಾರು ಸರಣಿ ಕ್ರಮಗಳ ಅಂತಿಮ ಹಂತ ಎನ್ನಬಹುದು. ಸ್ಟ್ರಕ್ಚರಲ್ ಅಡ್ಜಸ್ಟ್‌ಮೆಂಟ್ ಪ್ರೊಗ್ರಾಂ (ಎಸ್‌ಎಪಿ) ಹಾಗೂ ಹೊಸ ಆರ್ಥಿಕ ನೀತಿ ಎನ್‌ಸಿಪಿಗೆ ಉನ್ನತ ಶಿಕ್ಷಣ ಅದಾಗಲೇ ಒಂದು ಕೊಳ್ಳೆಯಾಗಿತ್ತು.

ಈ ಮೊದಲು ರಾಷ್ಟ್ರೀಯ ಜ್ಞಾನ ಆಯೋಗವು ತನ್ನ ವರದಿಯಲ್ಲಿ ಶಿಕ್ಷಣದ ಬದಲಾಗುತ್ತಿರುವ ಪಾತ್ರವನ್ನು ಸಮರ್ಥಿಸಲು ಪ್ರಯತ್ನಿಸಿತ್ತು.
‘‘ಇಪ್ಪತ್ತೊಂದನೇ ಶತಮಾನದಲ್ಲಿ ಜ್ಞಾನವನ್ನು ಒಂದು ಮುಖ್ಯ ಪ್ರೇರಕ ಶಕ್ತಿ ಎಂದು ಪರಿಗಣಿಸಲಾಗಿದೆ ಮತ್ತು ಜಾಗತಿಕವಾಗಿ ಒಂದು ಸ್ಪರ್ಧಾತ್ಮಕ ಆಟಗಾರನಾಗಿ ಹೊರಹೊಮ್ಮುವ ದೇಶದ ಸಾಮರ್ಥ್ಯವು ಜ್ಞಾನ ಸಂಪನ್ಮೂಲಗಳನ್ನು ಆಧರಿಸುತ್ತದೆ’’ ಎಂದು ಆ ವರದಿ ಹೇಳಿತ್ತು.

ಅಲ್ಲದೆ, ದೇಶದ ‘‘ಉನ್ನತ ಶಿಕ್ಷಣ ವ್ಯವಸ್ಥೆಗೆ ಅವಕಾಶಗಳ ವಿಸ್ತಾರ ಬೃಹತ್ ನೆಲೆಯಲ್ಲಿ ನಡೆದು ರಾಷ್ಟ್ರಾದ್ಯಂತ ಒಂದೂವರೆ ಸಾವಿರ ವಿಶ್ವವಿದ್ಯಾನಿಲಯಗಳು ಕಾರ್ಯಚರಿಸುವಂತಾಗಬೇಕು. ಉನ್ನತ ಶಿಕ್ಷಣಕ್ಕೆ ಸ್ವತಂತ್ರವಾದ ಒಂದು ನಿಯಂತ್ರಕ ಸಂಸ್ಥೆ (ಇಂಡಿಪೆಂಡೆಂಟ್ ರೆಗ್ಯುಲೇಟರಿ ಅಥಾರಿಟಿ ಫಾರ್ ಹೈಯರ್ ಎಜುಕೇಷನ್-ಐಆರ್‌ಎಎಚ್‌ಇ) ಸ್ಥಾಪನೆಯಾಗಬೇಕು’’ ಎಂದು ಆ ವರದಿ ಹೇಳಿತ್ತು ಆದರೆ ಈ ಸಂಸ್ಥೆಯಲ್ಲಿ ಸರಕಾರದ ಸಚಿವಾಲಯಗಳು ಸೇರಿದಂತೆ ಯಾರೂ ಮೂಗು ತೂರಿಸಬಾರದು. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕೆಂದು ಆ ವರದಿಯಲ್ಲಿ ಹೇಳಲಾಗಿತ್ತು.

ಸುಮಾರಾಗಿ ಅದೇ ವೇಳೆ 2009ರಲ್ಲಿ ಯಶ್‌ಪಾಲ್ ಸಮಿತಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತು. ಆ ಸಮಿತಿಯ ಒಂದು ಮುಖ್ಯ ಶಿಫಾರಸು ಯುಜಿಸಿ ಮತ್ತು ಎಐಸಿಟಿಇ ಅಂತಹ ಎಲ್ಲ ಸಂಸ್ಥೆಗಳನ್ನು ರದ್ದು ಮಾಡಿ ಉನ್ನತ ಶಿಕ್ಷಣ ಆಯೋಗವೊಂದನ್ನು ಸ್ಥಾಪಿಸಬೇಕು.

ಈಗ ಕೇರಳ ರಾಜ್ಯ ಉನ್ನತ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿರುವ ರಾಜನ್ ಗುರುಕ್ಕಲ್, ‘‘ಯುಜಿಸಿಗೆ ಕೆಂಪು ಕೆಂಪು ಪಟ್ಟಿಯ ಅಧಿಕಾರಶಾಹಿ ವಿಳಂಬ ಮತ್ತು ವಿತರಣಾತ್ಮಕ ನ್ಯಾಯದಂತಹ ಹಲವು ಮಿತಿಗಳಿವೆ’’ ಎಂದು ಸ್ವಲ್ಪಸಮಯದ ಹಿಂದೆ ಬರೆದಿದ್ದರು. ಆದರೆ ‘‘ಅದು ವಿಭಿನ್ನ ಜ್ಞಾನ ಶಾಖೆಗಳಲ್ಲಿರುವ ತಜ್ಞರ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ’’ ಎಂದು ಅವರು ಒಪ್ಪಿದ್ದರು.

ಹಣಕಾಸು ಬದ್ಧತೆಗಳು ಹಾಗೂ ವಿಶ್ವವಿದ್ಯಾನಿಲಯಗಳ, ಕಾಲೇಜುಗಳ ಮತ್ತು ಸಂಶೋಧನಾ ಸಂಸ್ಥೆಗಳ ಉಸ್ತುವಾರಿಯ ನಿಟ್ಟಿನಲ್ಲಿ ಯುಜಿಸಿ ನಿಜವಾಗಿಯೂ ಕೇಂದ್ರ ಸರಕಾರಕ್ಕೆ ಒಂದು ‘ಹೊರೆ’ಯಾಗಿ ಪರಿಣಮಿಸಿದೆ. ಇದೀಗ ಅದರ ರದ್ದತಿಯೊಂದಿಗೆ ಉನ್ನತ ಶಿಕ್ಷಣದ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ಕೈಗೆ ತೆಗೆದುಕೊಳ್ಳುತ್ತದೆ. ಪರಿಣಾಮವಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಭಾರತದ ಉನ್ನತ ಶಿಕ್ಷಣ ಆಯೋಗಕ್ಕೆ ಕೇವಲ ಸಲಹೆ ನೀಡುವ, ಶಿಫಾರಸುಗಳನ್ನು ಮಾಡುವ ಕೆಲಸ ಮಾತ್ರ ಇರುತ್ತದೆ, ವಿಶೇಷವಾಗಿ ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ. ಇದು ದೇಶದ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವುಗಳು ತಾವು ನಡೆಸುವ ಕೋರ್ಸ್‌ಗಳನ್ನು ಮುಂದುವರಿಸಲು ಹಾಗೂ ಶಿಕ್ಷಕರಿಗೆ ವೇತನ ನೀಡಲು ಹಣಕಾಸು ಸಂಗ್ರಹ ಮಾಡಲೇಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ‘ವಿಶ್ವದರ್ಜೆಯ ಸಂಸ್ಥೆ’ ಎನ್ನುತ್ತಾ ಖಾಸಗಿ/ಕಾರ್ಪೊರೇಟ್ ರಂಗದವರು ಸ್ವಾಯತ್ತೆ ಹೆಸರಿನಲ್ಲಿ ನಾಯಿ ಕೊಡೆಗಳಂತೆ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದಕ್ಕೆ ಈ ಪರಿಸ್ಥಿತಿ ನೆರವಾಗುತ್ತದೆ.

ಈಗಾಗಲೇ ಭಾರತದಲ್ಲಿ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳು ಕೇಸರೀ ಕರಣದ ಹಾಗೂ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ಬೆದರಿಕೆಗೊಳಗಾಗಿವೆ. ವಿಶ್ವಾದ್ಯಂತ ಸರ್ವಾಧಿಕಾರಿ ಆಡಳಿತಗಳ ಕಪಿಮುಷ್ಠಿಯಲ್ಲಿ ಶೈಕ್ಷಣಿಕ ಸ್ವಾತಂತ್ರ ನಲುಗುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಕೇಂದ್ರ ಸರಕಾರದ ಹೊಸ ಕಾಯ್ದೆಯು ಗಾಯದ ಮೇಲೆ ಬರೆ ಎಳೆಯಲಿದೆ.

ಕೃಪೆ: countercurrents.org

Writer - ಕೆ. ಎಂ. ಸೇಥಿ

contributor

Editor - ಕೆ. ಎಂ. ಸೇಥಿ

contributor

Similar News