ಸಲಿಂಗಿಯಾಗಿರುವುದು ಹಿಂದುತ್ವಕ್ಕೆ ವಿರುದ್ಧ: ಸುಬ್ರಮಣಿಯನ್ ಸ್ವಾಮಿ

Update: 2018-07-10 09:06 GMT

ಹೊಸದಿಲ್ಲಿ, ಜು.10:  ಸಲಿಂಗಿಯಾಗಿರುವುದು `ಸಹಜವಲ್ಲ' ಹಾಗೂ ಅದು ಹಿಂದುತ್ವಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ಗುಣಪಡಿಸಬಹುದೇ ಎಂಬುದರ ಬಗ್ಗೆ ವೈದ್ಯಕೀಯ ಸಂಶೋಧನೆ ಅಗತ್ಯವಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸಲಿಂಗರತಿಯನ್ನು ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ವಿರುದ್ಧ ದಾಖಲಾಗಿರುವ ಅಪೀಲುಗಳ ಮೇಲಿನ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಸ್ವಾಮಿಯ ಈ ಹೇಳಿಕೆ ಬಂದಿದೆ.

ಸಾಂವಿಧಾನಿಕ ಪೀಠ ಈ ಅಪೀಲುಗಳನ್ನು ಕೈಗೆತ್ತಿಕೊಳ್ಳುವ ಬದಲು ಏಳು ಅಥವಾ ಒಂಬತ್ತು ಮಂದಿ ನ್ಯಾಯಾಧೀಶರುಗಳಿರುವ ಪೀಠ ವಿಚಾರಣೆ ನಡೆಸಬೇಕು ಎಂದು ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಸಲಿಂಗಕಾಮ ಒಂದು ಅನುವಂಶಿಕ ದೋಷವೆಂದು 2015ರಲ್ಲಿ ಸ್ವಾಮಿ ಹೇಳಿದ್ದರು. ಈ ವರ್ಷದ ಜನವರಿಯಲ್ಲಿ ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿದ್ದ ಸ್ವಾಮಿ ಸೆಕ್ಷನ್ 277 ಅನ್ನು ಉಳಿಸಿಕೊಳ್ಳಬೇಕು ಹಾಗೂ ತಮ್ಮ ಲೈಂಗಿಕ ಒಲವುಗಳನ್ನು ತೋರಿಸಿಕೊಳ್ಳುವ ಸಲಿಂಗಕಾಮಿಗಳನ್ನು ಶಿಕ್ಷಿಸಬೇಕೆಂದು ಹೇಳಿದ್ದರು.

ಎಲ್‍ಜಿಬಿಟಿ ಸಮುದಾಯ ಏನೇ ಮಾಡಬೇಕೆಂದಿದ್ದರೂ ಅದನ್ನು ಖಾಸಗಿಯಾಗಿ ಮಾಡಿಕೊಳ್ಳಲಿ. ಅವರ ಲೈಂಗಿಕ ಒಲವುಗಳನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳುವುದು ಬೇಡ ಎಂದು ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ತರುವಾಯ ಸೆಕ್ಷನ್ 277 ಬಗ್ಗೆ ತನ್ನ ಪ್ರತಿಕ್ರಿಯೆ ನೀಡಲು ಕೇಂದ್ರ ತೋರಿಸಿರುವ ವಿಳಂಬಕ್ಕೆ ಆಕ್ಷೇಪ ಸೂಚಿಸಿರುವ ಸುಪ್ರೀಂ ಕೋರ್ಟ್ ಇನ್ನು ಹೆಚ್ಚು ಸಮಯಾವಕಾಶ ನೀಡಲು ಸಾಧ್ಯವಿಲ್ಲವೆಂದು ಹೇಳಿದೆ.

2009ರಲ್ಲಿ ದಿಲ್ಲಿ ಹೈಕೋರ್ಟ್ ಸೆಕ್ಷನ್ 277 ಅನ್ವಯ ಸಲಿಂಗಕಾಮ ಅಪರಾಧವಲ್ಲವೆಂದು ಘೋಷಿಸಿದ್ದರೆ ಈ ಆದೇಶವನ್ನು ಸುಪ್ರೀಂ ಕೋರ್ಟಿನ ಪೀಠ ಬದಿಗೆ ಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News