ಕೇಂದ್ರ ಸಚಿವ ಜಯಂತ್ ಸಿನ್ಹಾರನ್ನು ಉಚ್ಛಾಟಿಸಿ: ಮಾಜಿ ಐಎಎಸ್, ಐಪಿಎಸ್ ಅಧಿಕಾರಿಗಳ ಆಗ್ರಹ

Update: 2018-07-10 11:44 GMT

ಹೊಸದಿಲ್ಲಿ, ಜು.10: ಗುಂಪು ಥಳಿತ ಪ್ರಕರಣದ ಆರೋಪಿಗಳನ್ನು ಸನ್ಮಾನಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್ ಸಿನ್ಹಾ ಅವರು ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಉಚ್ಚಾಟಿಸಬೇಕು ಎಂದು ಐವತ್ತು ಮಂದಿ ಮಾಜಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಗುಂಪೊಂದು ಜಂಟಿ ಹೇಳಿಕೆಯೊಂದರಲ್ಲಿ ಆಗ್ರಹಿಸಿದೆ.

ಜಾರ್ಖಂಡ್ ನಲ್ಲಿ ಕಳೆದ ವರ್ಷದ ಜೂನ್ 29ರಂದು ಗೋಸಾಗಾಟ ಶಂಕೆಯಲ್ಲಿ ವ್ಯಾಪಾರಿಯೊಬ್ಬರನ್ನು ಥಳಿಸಿ ಹತ್ಯೆಗೈದ ಪ್ರಕರಣದ 8 ಆರೋಪಿಗಳನ್ನು ಹಝಾರಿಬಾಗ್ ಕ್ಷೇತ್ರದ ಬಿಜೆಪಿ ಸಂಸದರೂ ಆಗಿರುವ ಸಚಿವರು ಇತ್ತೀಚೆಗೆ ಸನ್ಮಾನಿಸಿದ್ದು ಭಾರೀ ವಿವಾದಕ್ಕೀಡಾಗಿತ್ತು.

ನಾಗರಿಕರಿಗೆ ಭದ್ರತೆಯೊದಗಿಸಬೇಕಾದ ಸರಕಾರ ತನ್ನ ಕರ್ತವ್ಯದಲ್ಲಿ ವಿಫಲವಾದಾಗಲೆಲ್ಲಾ ಆ ತಪ್ಪನ್ನು ಎತ್ತಿ ತೋರಿಸುವ ಕೆಲಸ ತಮ್ಮ ಗುಂಪು ಕಳೆದೊಂದು ವರ್ಷದಿಂದ ಮಾಡುತ್ತಿದೆ ಎಂದು ಹೇಳಿಕೆಗೆ ಸಹಿ ಹಾಕಿರುವ ಮಾಜಿ ಅಧಿಕಾರಿಗಳು ಹೇಳಿದ್ದಾರೆ. "ಕೇಂದ್ರ ಸರಕಾರದ  ಹಿರಿಯ ಸದಸ್ಯರೊಬ್ಬರು ಬಹಿರಂಗವಾಗಿ ಗಂಭೀರ ಅಪರಾಧ ನಡೆಸಿದವರನ್ನು  ಬೆಂಬಲಿಸಿರುವುದು  ನಾಗರಿಕರ ಹಿತರಕ್ಷಣೆಯ ಜವಾಬ್ದಾರಿ ಹೊತ್ತ ಸರಕಾರಿ ಅಧಿಕಾರಿಗಳಿಗೆ ತಪ್ಪು ಸಂದೇಶ ನೀಡಿದಂತಾಗುವುದು'' ಎಂದು ಹೇಳಿಕೆ ತಿಳಿಸಿದೆ.

"ಕೇಂದ್ರ ಸಚಿವರೊಬ್ಬರು ಈ ರೀತಿ ವರ್ತಿಸಿರುವುದು ಮತ್ತಷ್ಟು ಕಳವಳಕಾರಿ. ಗುಂಪು ಥಳಿತ ಪ್ರಕರಣದ ಅಪರಾಧಿಗಳು ಕಾನೂನಿನನ್ವಯ  ಕ್ರಮ ಎದುರಿಸುತ್ತಾರೆ. ಹಾಗಿರುವಾಗ ಸಚಿವರೊಬ್ಬರು ಅವರು ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳೆಂಬಂತೆ ಅವರನ್ನು ಸನ್ಮಾನಿಸಿರುವುದು ಸರಿಯಲ್ಲ. ಸಾರ್ವಜನಿಕರ ಖಂಡನೆಯ ನಂತರ ಸಚಿವರು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಸಮರ್ಥನೆಯೂ ಸರಿಯಲ್ಲ" ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News