ಮುಳ್ಳಯ್ಯನಗಿರಿಯಲ್ಲಿ ಸಂಚಾರ ದುಸ್ತರ

Update: 2018-07-10 18:33 GMT

ಚಿಕ್ಕಮಗಳೂರು,ಜು.10: ಕಾಫಿನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹತ್ತು ಹಲವು ಅವಾಂತರಗಳನ್ನು ಸೃಷ್ಟಿಸಿದ್ದು, ನಾಡಿನ ಹೆಸರಾಂತ ಪ್ರವಾಸಿ ತಾಣವಾಗಿರುವ ಮುಳ್ಳಯ್ಯನಗಿರಿ ಶ್ರೇಣಿಗಳ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿಯಿಂದ ಮಳೆ ನೀರು ಹರಿದು ರಸ್ತೆಯ ಕೆಲ ಭಾಗಗಳಲ್ಲಿ ದರೆ ಕುಸಿಯುತ್ತಿರುವುದರಿಂದ ಪ್ರವಾಸಿಗರ ವಾಹನಸ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

ಮುಳ್ಳಯ್ಯನಗಿರಿ ಶ್ರೇಣಿ ವ್ಯಾಪ್ತಿಯಲ್ಲಿ ಸತತ ಮಳೆಯಾಗುತ್ತಿದ್ದು, ರಸ್ತೆ ಪಕ್ಕದ ಗುಡ್ಡಗಳ ಮಣ್ಣು ಕುಸಿದು ಭಾರೀ ಗಾತ್ರದ ಮರಗಳು, ಬಂಡೆಕಲ್ಲುಗಳು ರಸ್ತೆ ಅಡ್ಡಲಾಗಿ ಬೀಳುತ್ತಿವೆ. ಇದರಿಂದಾಗಿ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಸೋಮವಾರ ರಾತ್ರಿ ಹಾಗೂ ಮಂಗಳವಾರ ಸುರಿದ ಮಳೆಗೆ ಚಿಕ್ಕಮಗಳೂರು, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಹಾಗೂ ಬಾಬಾಬುಡಾನ್ ದರ್ಗಾದ ಸಂಪರ್ಕ ರಸ್ತೆಯಲ್ಲಿ ಅಲ್ಲಲ್ಲಿ ಧರೆ ಕುಸಿದು ಮಣ್ಣು ರಸ್ತೆ ಮೇಲೆ ಬಿದ್ದಿದೆ. ಇನ್ನು ಕೆಲವೆಡೆ ಮಳೆ ನೀರಿನಿಂದಾಗಿ ಇಳಿಜಾರಿನ ರಸ್ತೆಯಲ್ಲಿ ಮಣ್ಣು ಸವಕಳಿ, ಕೊರೆತ ಉಂಟಾಗಿ ಇಡೀ ರಸ್ತೆಯೇ ಕುಸಿಯುವ ಆತಂಕ ಪ್ರವಾಸಿಗರನ್ನು ಕಾಡುತ್ತಿದೆ. ಮಳೆಯ ನೀರು ರಸ್ತೆ ಮೇಲೆಯೇ ಹರಿಯುತ್ತಿರುವುದರಿಂದ ಗಿರಿಗಳ ಮೇಲಿರುವ ರಸ್ತೆಯ ಬದಿಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ.

ದೂರದ ಊರಿನ ಪ್ರವಾಸಿಗರಿಗೆ ಸಾರ್ವಜನಿಕರು ಅಪಾಯ ಇರುವ ರಸ್ತೆಗಳ ಅಲ್ಲಲ್ಲಿ ಕಲ್ಲುಗಳನ್ನಿಟ್ಟು ಪ್ರವಾಸಿಗರಿಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡು ನಿಟ್ಟಿನಲ್ಲಿ ಸಹಾಯ ಮಾಡುತ್ತಿದ್ದಾರೆ.

ಮತ್ತೊಂದೆಡೆ ಚಿಕ್ಕಮಗಳೂರು ನಗರದ ಕೈಮರದಿಂದ ಮುಳ್ಳುಯ್ಯನಗಿರಿ ಹಾಗೂ ಬಾಬಾಬುಡಾನ್ ದರ್ಗಾ ಸಂಪರ್ಕ ರಸ್ತೆಯಲ್ಲಿ ಭಾರೀ ಮಂಜು ಕವಿದಿದೆ. ಗಿರಿ ಏರುತ್ತಿದ್ದಂತೆ ದಟ್ಟ ಮಂಜು ಮತ್ತಷ್ಟು ಏರಿಕೆಯಾಗುತ್ತಿರುವುದರಿಂದ ವಾಹನ ಚಾಲಕರು ಆತಂಕದಲ್ಲೇ ವಾಹನ ಚಾಲನೆ ಮಾಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News