ನಾನು ಬಯಸಿದ ಚರ್ಚೆಗಾಗಿ ಕೆಲಸ ಕಳೆದುಕೊಳ್ಳುವುದು ನನ್ನ ಪಾಲಿಗೆ ಸಣ್ಣ ನಷ್ಟ: ಶಾ ಫೈಝಲ್

Update: 2018-07-11 09:43 GMT

ಹೊಸದಿಲ್ಲಿ, ಜು.11: ನಾಗರಿಕ ಸೇವಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿಲ್ಲವೇ ಎನ್ನುವ ಹೊಸ ಚರ್ಚೆಯೊಂದನ್ನು ಜಮ್ಮು ಮತ್ತು ಕಾಶ್ಮೀರದ ಪ್ರಥಮ ಯುಪಿಎಸ್ಸಿ ಟಾಪರ್ ಶಾ ಫೈಝಲ್ ಅವರ ಟ್ವೀಟ್ ಹುಟ್ಟುಹಾಕಿದೆ.

"ನಾನು ಬಯಸುತ್ತಿರುವ ಚರ್ಚೆಯ ಪರಿಣಾಮಕ್ಕೆ ಹೋಲಿಸಿದರೆ ನಾನು ಕೆಲಸ ಕಳೆದುಕೊಳ್ಳುವುದು ಸಣ್ಣ ನಷ್ಟವಾಗಿದೆ. ಹೌದು ನಾನು ನನ್ನ ಕೆಲಸ ಕಳೆದುಕೊಳ್ಳಬಹುದು" ಎಂದವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸರಕಾರಿ ಅಧಿಕಾರಿಗಳಿಗೆ ಒಂದು ಇಮೇಜ್ ಇದೆ. 'ಆತ ಅನಾಮಧೇಯನಾಗಿರಬೇಕು. ಆತ ಯಾವುದನ್ನೂ ಚರ್ಚಿಸಬಾರದು. ಆತನ ಸುತ್ತಲು ಏನೇ ನಡೆದರೂ ಕುರುಡನಾಗಿರಬೇಕು' ಎಂಬುದು. ಈ ಇಮೇಜ್ ಇಂದು ಬದಲಾಗಬೇಕಾದ ಅಗತ್ಯವಿದೆ ಎಂದವರು ಹೇಳಿದರು.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಫೈಝಲ್ ಮಾಡಿದ್ದ ಟ್ವೀಟ್ ವಿವಾದ ಸೃಷ್ಟಿಸಿತ್ತು. ಸಾಮಾನ್ಯ ಆಡಳಿತ ಇಲಾಖೆ ಫೈಝಲ್ ಗೆ ನೀಡಿರುವ ನೋಟಿಸ್‌ನಲ್ಲಿ "ಕರ್ತವ್ಯವನ್ನು ನಿಭಾಯಿಸುವಲ್ಲಿ ನೀವು ಪ್ರಾಮಾಣಿಕತೆ ಮತ್ತು ವೃತ್ತಿ ನಿಷ್ಠೆಯಲ್ಲಿ ವಿಫಲರಾಗಿದ್ದೀರಿ ಎಂಬ ಆರೋಪವಿದೆ. ಈ ಮೂಲಕ ಸಾರ್ವಜನಿಕ ಸೇವಕರಾಗಲು ಅರ್ಹರಲ್ಲ ಎನಿಸುವ ರೀತಿ ವರ್ತಿಸಿದ್ದೀರಿ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಕೋರಿದೆ" ಎಂದು ವಿವರಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾ ಫೈಝಲ್, "ದಕ್ಷಿಣ ಏಷ್ಯಾದ ಅತ್ಯಾಚಾರ ಸಂಸ್ಕೃತಿ ವಿರುದ್ಧ ನಾನು ಮಾಡಿದ ಕಹಿ ಟ್ವೀಟ್‌ಗೆ ಮೇಲಧಿಕಾರಿಯಿಂದ ಪ್ರೇಮಪತ್ರ ಬಂದಿದೆ. ಸಾಮ್ರಾಜ್ಯಶಾಹಿ ಕಾಲದ ಸೇವಾ ನಿಯಮಾವಳಿಯನ್ನು ಪ್ರಜಾಪ್ರಭುತ್ವ ಆಡಳಿತದ ಆಧುನಿಕ ಭಾರತದಲ್ಲೂ ಅನ್ವಯಿಸುವುದು ವಿಪರ್ಯಾಸ. ನಿಯಮಾವಳಿಯ ಬದಲಾವಣೆಗೆ ಒತ್ತು ನೀಡುವ ಸಲುವಾಗಿ ನಾನು ಇದನ್ನು ಷೇರ್ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News