ಮಲೆನಾಡಲ್ಲಿ ಮುಂದುವರೆದ ವರ್ಷಧಾರೆ: ಪ್ರವಾಹ ಭೀತಿ ಸೃಷ್ಟಿಸಿದ ತುಂಗಾ ನದಿ

Update: 2018-07-11 12:16 GMT

ಶಿವಮೊಗ್ಗ, ಜು. 11: ಮಲೆನಾಡು ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೆ ಬೀಳುತ್ತಿರುವ ವರ್ಷಧಾರೆಯ ಅಬ್ಬರ ಮುಂದುವರಿದಿದೆ. ಬುಧವಾರ ಕೂಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ತುಂಗಾ ನದಿಯು ಹಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಭೀತಿ ಸೃಷ್ಟಿಸಿದೆ. 

ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶದಲ್ಲಿ ಮಳೆಯ ಆರ್ಭಟ ಬಿರುಸಾಗಿದೆ. ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಹೊಸನಗರ ತಾಲೂಕಿನ ಹಲವೆಡೆಯೂ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯಾದ ವರದಿಗಳು ಬಂದಿವೆ. 

ಬುಧವಾರ ಬೆಳಗ್ಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ, 32.51 ಮಿಲಿ ಮೀಟರ್ (ಮಿ.ಮೀ.) ಆಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಮಾಣಿಯಲ್ಲಿ 128 ಮಿ.ಮೀ., ಯಡೂರಿನಲ್ಲಿ 168 ಮಿ.ಮೀ., ಆಗುಂಬೆಯಲ್ಲಿ 163 ಮಿ.ಮೀ., ಹುಲಿಕಲ್‍ನಲ್ಲಿ 91 ಮಿ.ಮೀ. ಹಾಗೂ ಮಾಸ್ತಿಕಟ್ಟೆಯಲ್ಲಿ 98 ಮಿ.ಮೀ. ವರ್ಷಧಾರೆಯಾಗಿದೆ. 

ಉಳಿದಂತೆ ತೀರ್ಥಹಳ್ಳಿಯಲ್ಲಿ 99.20 ಮಿ.ಮೀ., ಸಾಗರದಲ್ಲಿ 40.40 ಮಿ.ಮೀ., ಹೊಸನಗರದಲ್ಲಿ 31.40 ಮಿ.ಮೀ., ಶಿಕಾರಿಪುರದಲ್ಲಿ 14.40 ಮಿ.ಮೀ., ಸೊರಬದಲ್ಲಿ 26.20 ಮಿ.ಮೀ., ಭದ್ರಾವತಿಯಲ್ಲಿ 7.20 ಮಿ.ಮೀ., ಶಿವಮೊಗ್ಗದಲ್ಲಿ 7.80 ಮಿ.ಮೀ. ವರ್ಷಧಾರೆಯಾಗಿದೆ. ಬುಧವಾರ ಬೆಳಿಗ್ಗೆಯಿಂದ ಶಿವಮೊಗ್ಗ ನಗರದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನಾಗರಿಕರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವಂತಾಗಿತ್ತು. 

ಡ್ಯಾಂ ವಿವರ: ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಇನ್ನಷ್ಟು ಹೆಚ್ಚಳ ಕಂಡುಬರುತ್ತಿದ್ದು, 42,336 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಯ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1783.45 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು 1762.90 ಅಡಿಯಿತ್ತು. 

ಭದ್ರಾ ಡ್ಯಾಂ ಒಳಹರಿವು 33,844 ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಹೊರ ಹರಿವನ್ನು 233 ಕ್ಯೂಸೆಕ್‍ಗೆ ಇಳಿಕೆ ಮಾಡಲಾಗಿದೆ. ಡ್ಯಾಂನ ನೀರಿನ ಮಟ್ಟ 159 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 125.70 ಅಡಿಯಿತ್ತು. ಉಳಿದಂತೆ ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು 51,481 ಕ್ಯೂಸೆಕ್ ಇದ್ದು, 50,025 ಕ್ಯೂಸೆಕ್ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಬಿಡಲಾಗುತ್ತಿದೆ. 

ಮುನ್ಸೂಚನೆ: ಪ್ರಸ್ತುತ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಮತ್ತೊಂದೆಡೆ ಮಲೆನಾಡು ಭಾಗದಲ್ಲಿ ಭತ್ತ ಬಿತ್ತನೆ ಹಾಗೂ ನಾಟಿ ಕಾರ್ಯ ಚುರುಕುಗೊಂಡಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಕಳೆದ ಬಾರಿಗಿಂತ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯ ನಿರೀಕ್ಷಿಸಲಾಗಿದೆ. 

ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಕುಸಿತ
ರಾಜ್ಯದ ಹಲವೆಡೆ ಮುಂಗಾರು ಮಳೆ ಚುರುಕುಗೊಂಡಿದೆ. ತಂಪನೆಯ ಹವಾಗುಣ ಮನೆ ಮಾಡಿದೆ. ಇದರಿಂದ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಈ ಕಾರಣದಿಂದ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಕಡಿಮೆಗೊಳಿಸಲಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿಯ ವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನಾ ಕಡಿಮೆಗೊಳಿಸಲಾಗಿದೆ. ಈ ಕಾರಣದಿಂದ ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ನೀರು ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಯ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ.

ಗುರುವಾರವೂ ತೀರ್ಥಹಳ್ಳಿ ತಾ. ಶಾಲೆಗಳಿಗೆ ರಜೆ
ಸತತ ಮಳೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಪ್ರಮುಖ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವ ಕಾರಣದಿಂದ ಕಳೆದ ಸೋಮವಾರದಿಂದ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಕಡಿಮೆಯಾಗದ ಕಾರಣ ಗುರುವಾರ ಕೂಡ ರಜೆ ವಿಸ್ತರಣೆ ಮಾಡಲಾಗಿದೆ. 'ತೀರ್ಥಹಳ್ಳಿ ತಾಲೂಕಿನ ಎಲ್ಲ ಶಾಲೆಗಳಿಗೆ ಹಾಗೂ ಹೊಸನಗರ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಶಾಲೆಗಳಿಗೆ ಗುರುವಾರ ಕೂಡ ರಜೆ ಘೋಷಿಸಲಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾದೋರವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News