ರಾಜ್ಯದೆಲ್ಲೆಡೆ ಇನ್ನೆರಡು ದಿನ ಮಳೆ ಸಾಧ್ಯತೆ

Update: 2018-07-11 12:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆ ಮುಂದುವರೆಯಲಿದ್ದು, ಒಳನಾಡಿನಲ್ಲೂ ಇನ್ನೆರಡು ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ.

ಈ ಬಗ್ಗೆ ಬುಧವಾರ ಮಾಹಿತಿ ನೀಡಿದ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‌ರೆಡ್ಡಿ, ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಉಂಟಾಗಿದೆ. ಮೇಲ್ಮೈ ಸುಳಿಗಾಳಿಯೂ ಕಂಡುಬಂದಿದ್ದು, ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಇದರಿಂದ ಹೆಚ್ಚಿನ ಮಳೆ ಸುರಿಯುತ್ತಿದ್ದು, ಇನ್ನು ನಾಲ್ಕೈದು ದಿನಗಳ ಕಾಲ ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಒಳನಾಡಿನಲ್ಲೂ ಮಂಗಳವಾರ ಚದುರಿದಂತೆ ಕೆಲವೆಡೆ ಉತ್ತಮ ಮಳೆಯಾಗಿದೆ. ಇಂದು ಮತ್ತು ನಾಳೆ ಇದೇ ರೀತಿ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಾಲ್ಕೈದು ದಿನಗಳಿಂದಲೂ ನಿರಂತರವಾಗಿ ಮಳೆ ಸುರಿಯಲಿದೆ. ಮುಂಗಾರು ಚುರುಕಾಗಿರುವುದರಿಂದ ಜಲಾಶಯಗಳ ಒಳಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ. ಆಲಮಟ್ಟಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಗೆ ಒಳಹರಿವು ಉತ್ತಮವಾಗಿದೆ. ರಾಜ್ಯದ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದ್ದರಿಂದ ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿತ್ತು. ಬಿತ್ತಿದ ಬೆಳೆಗಳು ಕೆಲವೆಡೆ ಒಣಗುತ್ತಿದ್ದವು. ಮತ್ತೆ ಮಳೆ ಶುರುವಾಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News