ಮೂಡಿಗೆರೆ ಯುವಕ ಕೇರಳದಲ್ಲಿ ನಿಗೂಢ ಸಾವು: ಕೊಲೆ ಶಂಕೆ

Update: 2018-07-12 11:28 GMT

ಮೂಡಿಗೆರೆ, ಜು.12: ಪಟ್ಟಣದ ಯುವಕನೋರ್ವ ಕೇರಳದ ಕೊಚ್ಚಿಯಲ್ಲಿ ತಾನು ಉದ್ಯೋಗದಲ್ಲಿದ್ದ ಕಂಪೆನಿಯ ಕಟ್ಟಡದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು, ಯುವಕನ ಸಾವಿನ ಬಗ್ಗೆ ವ್ಯಾಪಕ ಸಂಶಯ ಮೂಡುವಂತೆ ಮಾಡಿದೆ.

ಪಟ್ಟಣದ ಛತ್ರಮೈದಾನದ ನಿವಾಸಿ ಶೇಖ್ ಅಹ್ಮದ್ ಎಂಬವರ ಪುತ್ರ ರಿಝ್ವಾನ್ (24) ಮೃತ ಯುವಕ. ಕಳೆದ ಒಂದು ತಿಂಗಳ ಹಿಂದೆ ಕೇರಳದ ಕೊಚ್ಚಿನ್ ನಗರದ ನೈಕ್ ಚಪ್ಪಲಿ ತಯಾರಿಕೆ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ. ಯುವಕ ಜು.10 ರಂದು ತಾನು ವಾಸವಿದ್ದ ಕಂಪೆನಿಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಯುವಕನ ಪೋಷಕರು ಕೇರಳದ ಕೊಚ್ಚಿನ್‍ಗೆ ತೆರಳಿ ನೋಡಿದಾಗ ಯುವಕನ ಶವ ಆಸ್ಪತ್ರೆಯ ಶವಾಗಾರದಲ್ಲಿತ್ತು. ಕಂಪನಿಯ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಷ್ಟೇ ಹೇಳಿದ್ದಾರೆನ್ನಲಾಗಿದೆ.

'ಆತ ಆತ್ಮ ಹತ್ಯೆ ಮಾಡಿಕೊಳ್ಳಲು ಯಾವುದೇ ವೈಯಕ್ತಿಕ ಕಾರಣಗಳಿರಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಅಡಿಡಾಸ್ ಚಪ್ಪಲಿ ಕಂಪೆನಿಯ  ವ್ಯವಸ್ಥಾಪಕ ಹುದ್ದೆಯಲ್ಲಿದ್ದು, ಆ ಕಂಪೆನಿಯನ್ನು ಬಿಟ್ಟು ಒಂದು ತಿಂಗಳ ಹಿಂದೆಯಷ್ಟೇ ಕೇರಳದ ಕೊಚ್ಚಿನ್ ನಗರದಲ್ಲಿ ನೈಕ್ ಕಂಪೆನಿಯಲ್ಲಿ ಸೇರಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಆತನ ಅಜ್ಜಿ ತೀರಿಕೊಂಡಾಗ ಮೂಡಿಗೆರೆಯ ತನ್ನ ಮನೆಗೆ ಬಂದು ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ. ಆತನ ತಂದೆ ಶೇಖ್ ಅಹ್ಮದ್ ಅವರು, ನೀನು ಮದುವೆಯಾಗು ಎಂದಾಗ 'ನೀವು ಹೆಣ್ಣು ನೋಡಿ ನಾನು ಮದುವೆಯಾಗಲು ತಯಾರಿದ್ದೇನೆ' ಎಂದು ಹೇಳಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಕಾರಣಗಳೇನಾದರೂ ಇದ್ದಿದ್ದರೆ ಮದುವೆಯಾಗಲು ಆತ ಒಪ್ಪುತ್ತಿದ್ದನೇ?  ಅಜ್ಜಿಯ ಶವ ಸಂಸ್ಕಾರದ ಬಳಿಕ ಮತ್ತೆ ಆತ ಕೊಚ್ಚಿಗೆ ತೆರಳುತ್ತಿದ್ದನೇ ಎಂದು ಕುಟುಂಬಸ್ಥರು ಪ್ರಶ್ನಿಸುತ್ತಾರೆ. ಯುವಕ ರಿಝ್ವಾನ್‍ನದ್ದು ಆತ್ಮಹತ್ಯೆಯಲ್ಲ, ಇದೊಂದು ಕೊಲೆಯಾಗಿರಬಹುದು. ಕಂಪನಿಯಲ್ಲಿ ಉದ್ಯೋಗಿಗಳ ನಡುವೆ ಅಥವಾ ಬೇರೆ ಯಾರದೋ ನಡುವೆ ಯಾವುದಾದರೂ ಕಾರಣಗಳಿರಬಹುದು. ಅದರಿಂದಾಗಿಯೇ ಕೊಲೆಯಾಗಿರಬಹುದೆಂದು ಕೇರಳದ ಕೊಚ್ಚಿ ಪೊಲೀಸರು ಸಮಗ್ರ ತನಿಖೆ ನಡೆಸಿ ರಹಸ್ಯವನ್ನು ಬೇಧಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಯುವಕನ ಮೃತದೇಹವನ್ನು ಗುರುವಾರ ಬೆಳಗ್ಗೆ 7 ಗಂಟೆಗೆ ಪಟ್ಟಣಕ್ಕೆ ತರಲಾಗಿದ್ದು, ಈ ವೇಳೆ ಯುವಕನ ಮನೆ ಬಳಿ ಸಾವಿರಾರು ಮಂದಿ ಜಮಾಯಿಸಿ ಅಂತಿಮ ದರ್ಶನ ಪಡೆದರು. ಮಧ್ಯಾಹ್ನದ ವೇಳೆಗೆ ಅಂತ್ಯಸಂಸ್ಕಾರ ನೆರವೇರಿತು. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News