ಮಡಿಕೇರಿ: ವಿಶೇಷ ಮಸೂದೆ ಜಾರಿಗೆ ಸಿಎನ್‍ಸಿ ಒತ್ತಾಯ

Update: 2018-07-12 12:02 GMT

ಮಡಿಕೇರಿ, ಜು.12: ಜು.18 ರಿಂದ ಆರಂಭವಾಗಲಿರುವ ಪಾರ್ಲಿಮೆಂಟ್‍ನ ಮುಂಗಾರು ಅಧಿವೇಶನದಲ್ಲಿ ಕೊಡವ ಲ್ಯಾಂಡ್ ಸ್ವಾಯತ್ತತೆ (ಕೊಡವ ಕ್ವೆಸ್ಟ್ ಫಾರ್ ಅಟೋನಮಿ) ಹಾಗೂ ಕೊಡಗು ಕೇಂದ್ರಾಡಳಿತ ಪ್ರದೇಶ ರಚನೆಗೆ ಸಂಬಂಧಿಸಿದಂತೆ ವಿಶೇಷ ಮಸೂದೆಯನ್ನು ಮಂಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಸಂಘಟನೆ ಒತ್ತಾಯಿಸಿದೆ.

ಈ ಸಂಬಂಧ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಸತ್ಯಾಗ್ರಹ ನಡೆಸಲಾಯಿತಲ್ಲದೆ, ಉಪ ವಿಭಾಗಾಧಿಕಾರಿಗಳ ಮೂಲಕ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭಾರತ ಸಂವಿಧಾನದ 6ನೇ ಶೆಡ್ಯೂಲ್ ಪ್ರಕಾರ ಕೊಡವ ಲ್ಯಾಂಡ್ ಸ್ವಾಯತ್ತತೆಗಾಗಿ ಕಳೆದ 28 ವರ್ಷಗಳಿಂದ ಸಿ.ಎನ್.ಸಿ. ಹೋರಾಟ ನಡೆಸುತ್ತಾ ಬಂದಿದೆ. ಕೊಡಗಿಗೆ ಸಂವಿಧಾನದ 2 ಮತ್ತು 3ನೇ ವಿಧಿ ಪ್ರಕಾರ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಮತ್ತು ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕೆ ರಾಜ್ಯಾಂಗ ಖಾತ್ರಿ ಬೇಕೆಂಬ ಹಕ್ಕೊತ್ತಾಯ ಮಂಡಿಸಿ, ಶಾಂತಿಯುತವಾಗಿ ಆಂದೋಲನ ರೂಪಿಸಿದೆ. ಈ ಸಂಬಂಧ ಲೆಕ್ಕವಿಲ್ಲದಷ್ಟು ಜ್ಞಾಪನಾ ಪತ್ರ, ಮನವಿ ಪತ್ರಗಳನ್ನು ಭಾರತ ಸರ್ಕಾರ, ವಿಶ್ವಸಂಸ್ಥೆಗಳಿಗೆ ಸಲ್ಲಿಸುತ್ತಾ ಬರಲಾಗಿದ್ದು, ಶಾಂತಿಯುತವಾಗಿ ಸತ್ಯಾಗ್ರಹ, ವಿಚಾರಗೋಷ್ಠಿ, ಮಾನವ ಸರಪಳಿ, ಸಮಾವೇಶ ಮತ್ತು ರ್ಯಾಲಿಗಳನ್ನು ಕೊಡಗು, ಬೆಂಗಳೂರು ಮತ್ತು ದೆಹಲಿ ಹಾಗೂ ಈ ರಾಜ್ಯ ಮತ್ತು ದೇಶದ ಇತರೆಡೆಗಳಲ್ಲಿ ನಡೆಸುತ್ತಾ ಜಾಗೃತಿ ಮೂಡಿಸಲಾಗುತ್ತಿದೆ. ಹಿರಿಯ ರಾಜಕೀಯ ಮುತ್ಸದ್ದಿ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ಸುಬ್ರಹ್ಮಣ್ಯನ್ ಸ್ವಾಮಿ ಅವರು ಕೊಡವ ಲ್ಯಾಂಡ್ ಸ್ವಾಯತ್ತತೆ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಸಂವಿಧಾನ ತಿದ್ದುಪಡಿಗಾಗಿ ಖಾಸಗಿ ಮಸೂದೆಯನ್ನು ಮಂಡಿಸಿದ್ದು, ಅದು ಶೀಘ್ರದಲ್ಲೇ ಚರ್ಚೆಗೆ ಬರುವ ನಿರೀಕ್ಷೆಯಿದೆ ಎಂದು ನಾಚಪ್ಪ ಅವರು ಈ ಸಂದರ್ಭ ತಿಳಿಸಿದರು.

ಸರ್ಕಾರ ಅದಕ್ಕಾಗಿ ಕಾಯದೆ ಜು. 18ರಂದು ಆರಂಭಗೊಳ್ಳಲಿರುವ ಪಾರ್ಲಿಮೆಂಟ್‍ನ ಮುಂಗಾರು ಅಧಿವೇಶನದಲ್ಲಿ ‘ಕೊಡವ ಸ್ವಾಯತ್ತತೆ’ ಮತ್ತು ಕೊಡಗು ಕೇಂದ್ರಾಡಳಿತ ಪ್ರದೇಶದ ರಚನೆ ಸಂಬಂಧ ಮಸೂದೆ ಮಂಡಿಸುವ ಮೂಲಕ ರಾಜ್ಯಾಂಗ ಖಾತ್ರಿ ನೀಡಬೇಕು ಎಂದು ಒತ್ತಾಯಿಸಿದರು. 

ಸಂವಿಧಾನದ 340-342ನೇ ವಿಧಿಗೆ ತಿದ್ದುಪಡಿ ತರಬೇಕು ಹಾಗೂ ಬ್ರಾಹ್ಮಣ ಮತ್ತು ಆರ್ಯವೈಶ್ಯರ ಉದ್ಧಾರಕ್ಕಾಗಿ ಪ್ರತ್ಯೇಕ ಶಾಸನಬದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಿದಂತೆ ಕೊಡವರ ವಿಚಾರದಲ್ಲೂ ಅದೇ ಮಾನದಂಡವನ್ನು ಬಳಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 350ಎ ವಿಧಿಯಡಿ ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಲು ಬಂದ ಸರ್ಕಾರಿ ಆದೇಶ ದುರುಪಯೋಗವಾಗದಂತೆ ತಡೆಯಬೇಕು ಮತ್ತು ಉಲ್ಲಂಘಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ‘ಕುಶಾಲನಗರ’ದ ಹೆಸರನ್ನು ಬದಲಾಯಿಸಿ ಫ್ರೇಜರ್ ಪೇಟೆ ಎಂದು ಮರು ನಾಮಕರಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಸಿ.ಎನ್.ಸಿ ಪ್ರಮುಖರಾದ ಮೂಕೊಂಡ ದಿಲೀಪ್, ಬಲ್ಲಚಂಡ ಟಿಟ್ಟು, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ವಿಜು, ಕಿರಿಯಮಾಡ ಶರಿನ್, ಅಜ್ಜಿಕುಟ್ಟಿರ ಲೋಕೇಶ್, ಅಪ್ಪೆಂಗಡ ಮಾಲೆ ಪೂಣಚ್ಚ, ಕಾಟುಮಣಿಯಂಡ ಉಮೇಶ್, ಮಣವಟ್ಟಿರ ಶಿವಣಿ, ಮಣವಟ್ಟಿರ ನಂದ, ಮಣವಟ್ಟಿರ ಸ್ವರೂಪ್ ಮತ್ತು ಮಚ್ಚಮಾಡ ಮನು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News