ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಗಾಗಿ ಜು.18 ರಿಂದ ಚಳವಳಿ: ವಾಟಾಳ್ ನಾಗರಾಜ್

Update: 2018-07-12 12:34 GMT

ಬೆಂಗಳೂರು, ಜು.12: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡುವ ಜೊತೆಗೆ ಆ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಜು.18 ರಿಂದ ಮೂರು ದಿನಗಳ ಕಾಲ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣಗೊಂಡು 60 ವರ್ಷ ಕಳೆದರೂ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿಲ್ಲ. ಹೀಗಾಗಿ, ಮೊದಲ ಹಂತವಾಗಿ ಜು.18ರಂದು ದಾವಣಗೆರೆಯಲ್ಲಿ ಚಳವಳಿ ಆರಂಭಿಸಿ ಮರುದಿನ ಹುಬ್ಬಳ್ಳಿ ಸೇರಿದಂತೆ ಜೂ.21ಕ್ಕೆ ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ಹೈದರಾಬಾದ್-ಕರ್ನಾಟಕಕ್ಕೆ 371ಜೆ ಕಾಲಂ ಜಾರಿ ಮಾಡಿ 4ವರ್ಷ ಕಳೆದಿದೆ. ಆದರೆ, ರಾಜ್ಯ ಸರಕಾರದ ಬೇಜವಾಬ್ದಾರಿತನದಿಂದಾಗಿ ಇದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಹೈ.ಕ ಪ್ರದೇಶ ವ್ಯಾಪ್ತಿಯಲ್ಲಿ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸೇರಿ ಮೂಲಭೂತ ಸೌಕರ್ಯ ಒದಗಿಸಿ ಅವಶ್ಯಕವಿರುವ ಎಲ್ಲ ಸೌಕರ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಶಾಸಕಾಂಗ ಸಭೆಯಲ್ಲಿ ಕರ್ನಾಟಕವನ್ನು ಎರಡು ಭಾಗಗಳಾಗಿ ಮಾಡುವ ಮಾತನ್ನು ಆಡುತ್ತಿದ್ದಾರೆ. ಕರ್ನಾಟಕ ಎರಡು ಹೋಳು ಮಾಡಿದರೆ ಮತ್ತೆ ಅನ್ಯಾಯ ಆಗುವುದು ಖಚಿತ. ಹೀಗಾಗಿ, ರಾಜ್ಯವನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಲು ಬಿಡುವುದಿಲ್ಲ. ಸರಕಾರ ಈ ಕೂಡಲೇ ಎಚ್ಚೆತ್ತು ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ನಿರಂತರವಾಗಿ ತೀವ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಜು.18ರಿಂದ ಹಮ್ಮಿಕೊಂಡಿರುವ ಚಳವಳಿಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರವೀಣ್‌ ಕುಮಾರ್ ಶೆಟ್ಟಿ, ಸಾ.ರಾ.ಗೋವಿಂದು, ಶಿವರಾಮೇಗೌಡ, ಕೆ.ಆರ್.ಕುಮಾರ್, ಮಂಜುನಾಥ್ ದೇವ್ ಸೇರಿದಂತೆ ರಾಜ್ಯದ 2 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ವಾಟಾಳ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News