ಅಂಚೆ ಇಲಾಖೆಯಿಂದ ರಾಷ್ಟ್ರಮಟ್ಟದ ಪತ್ರ ಬರೆಯುವ ಸ್ಪರ್ಧೆ: ವಿಜೇತರಿಗೆ ಸಿಗಲಿದೆ 50 ಸಾವಿರ ರೂ.ವರೆಗೆ ಬಹುಮಾನ

Update: 2018-07-12 17:02 GMT

ಹೊಸದಿಲ್ಲಿ, ಜು.12: ಭಾರತೀಯ ಅಂಚೆ ಇಲಾಖೆಯು ‘ಢಾಯಿ ಆಕರ್’ ಎಂಬ ರಾಷ್ಟ್ರಮಟ್ಟದ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯು ಜೂ.15ರಿಂದ ಆರಂಭಗೊಂಡಿದ್ದು, ಸೆಪ್ಟಂಬರ್ 30ರವರೆಗೆ ಪತ್ರಗಳನ್ನು ಕಳುಹಿಸಲು ಅವಕಾಶ ಇದೆ. ಸ್ಪರ್ಧಿಗಳು ‘ನನ್ನ ತಾಯ್ನಾಡಿಗೆ ಪತ್ರ’ (ಲೆಟರ್ ಟು ಮೈ ಮದರ್‌ಲ್ಯಾಂಡ್) ಎಂಬ ವಿಷಯದಲ್ಲಿ ಪತ್ರ ಬರೆಯಬೇಕು.

ಇಂಗ್ಲಿಷ್/ಹಿಂದಿ, ಕನ್ನಡ ಸೇರಿದಂತೆ ಯಾವುದೇ ಸ್ಥಳೀಯ ಭಾಷೆಯಲ್ಲಿ ಪತ್ರ ಬರೆಯಲು ಅವಕಾಶವಿದೆ. ಆದರೆ ಮುದ್ರಿತ ಪತ್ರಗಳಿಗೆ ಅವಕಾಶ ಇರುವುದಿಲ್ಲ.

18 ವರ್ಷದೊಳಗಿನ ಮತ್ತು 18 ವರ್ಷಕ್ಕೆ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪತ್ರವನ್ನು ಎ4 ಅಳತೆಯ ಹಾಳೆಯಲ್ಲಿ ಗರಿಷ್ಠ 1000 ಪದಗಳ ಮಿತಿಯೊಳಗೆ ಬರೆದು ಎನ್ವೆಲ್ಯಾಪ್(ENVELOPE)ನಲ್ಲಿ ಅಥವಾ ಐಎಲ್‌ಸಿ (ಇನ್‌ಲ್ಯಾಂಡ್ ಲೆಟರ್ ಕಾರ್ಡ್) ಅಂತರ್ದೇಶೀಯ ಪತ್ರದಲ್ಲಿ 500 ಪದಗಳಿಗೆ ಮೀರದಂತೆ ಬರೆದು ಕಳುಹಿಸಬೇಕು.

ಸ್ಪರ್ಧಿಗಳು ತಮ್ಮ ವಯಸ್ಸಿನ ಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಪ್ರತೀ ಸರ್ಕಲ್(ರಾಜ್ಯ) ಮಟ್ಟದಲ್ಲಿ ಅಗ್ರ ಮೂರು ಪತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪತ್ರಗಳಿಗೆ ರಾಜ್ಯ ಮಟ್ಟದಲ್ಲಿ ಬಹುಮಾನ ನೀಡಲಾಗುತ್ತದೆ. ನಂತರ ಈ ಪತ್ರಗಳನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗಾಗಿ ನಿರ್ದೇಶನಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ.

ಸರ್ಕಲ್ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವವರು 25,000 ರೂ., ದ್ವಿತೀಯ 10,000 ರೂ. ಹಾಗೂ ತೃತೀಯ ಸ್ಥಾನ ಗಳಿಸುವವರು 5,000 ರೂ. ಬಹುಮಾನ ಗೆಲ್ಲುವ ಅವಕಾಶ ಪಡೆಯಲಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ 50,000 ರೂ., ದ್ವಿತೀಯ 25,000 ರೂ. ಹಾಗೂ ತೃತೀಯ 10,000 ರೂ. ಬಹುಮಾನ ಗೆಲ್ಲುವ ಅವಕಾಶವಿದೆ.

ಪತ್ರಗಳನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕರ್ನಾಟಕ ವೃತ್ತ, ಬೆಂಗಳೂರು-560001 ಇವರಿಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬಹುದು ಅಥವಾ ಸಮೀಪದ ಅಂಚೆ ಕಚೇರಿಯಲ್ಲೂ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News