ಕುದಿಬಂದ ಎಸರಿನಂತಿರುವ ಕವನಗಳು....

Update: 2018-07-12 18:30 GMT

‘ನನ್ನಪ್ಪ ಒಂದು ಗ್ಯಾಲಕ್ಸಿ’ ನೂರುಲ್ಲಾ ತ್ಯಾಮಗೊಂಡ್ಲು ಅವರ ಎರಡನೆಯ ಕವನ ಸಂಕಲನ. ನ್ಯಾಯಾಲಯದಲ್ಲಿ ಉದ್ಯೋಗಿಯಾಗಿರುವ ನೂರುಲ್ಲಾ ಅವರು, ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ನ್ಯಾಯಾಲಯದೊಳಗೆ ಬದುಕನ್ನು ಹತ್ತಿರದಿಂದ ಕಂಡವರು. ಬೇರೆ ಬೇರೆ ತರ್ಕ, ವಾದಗಳ ಮೂಲಕ ಬದುಕಿನ ಬೇರೆ ಬೇರೆ ಮಗ್ಗುಲನ್ನು ಅವರಿಗೆ ನೋಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವೂ ಅವರ ಕವಿತೆಗಳ ಮೇಲೆ ತನ್ನ ಪರಿಣಾಮವನ್ನು ಬೀರಿರುವ ಸಾಧ್ಯತೆ ಇದೆ.

  ‘ನನ್ನಪ್ಪ ಒಂದು ಗ್ಯಾಲಕ್ಸಿ’ ಎನ್ನುವ ಮೂರು ಪದಗಳೇ ಒಂದು ಪೂರ್ಣ ಕವಿತೆ. ಅದು ಅಪ್ಪ ಎನ್ನುವ ಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಸಂಕಲನದಲ್ಲಿ 51 ಕವಿತೆಗಳಿವೆ. ಎಲ್ಲ ಕವಿತೆಗಳಲ್ಲೂ ಸೂಫಿ ಚಿಂತನೆಯ ಪ್ರಭಾವ ಎದ್ದು ಕಾಣುತ್ತದೆ. ಭಾರತದ ಸದ್ಯದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಯತ್ತ ಕನ್ನಡಿ ಹಿಡಿಯುವ ಕವಿತೆಯಾಗಿ ‘ಭುಗಿಲೆದ್ದ ಹಾಡು’ ಗಮನ ಸೆಳೆಯುತ್ತದೆ. ಹಿಂಸೆಯ ಮೂಲಕ ವಿಚಾರಗಳನ್ನು ಬಗ್ಗುಬಡಿಯುವ ಶಕ್ತಿಗಳಿಗೆ ಕವಿ ಹೇಳುತ್ತಾನೆ ‘‘ಆದರೆ ವಿಶ್ವ ಚೇತನದ ಸಾವಿಲ್ಲದ ಬೀಜಗಳು/ಅವು, ಮತ್ತೆ ಮತ್ತೆ ಮೊಳಕೆಯೊಡೆಯುತ್ತಲೇ ಇರುತ್ತವೆ/ಈ ವಿಶಾಲ ಮಣ್ಣಿನಲ್ಲಿ/ಸಾವಿರ ಸಾವಿರ ಲಕ್ಷ ಲಕ್ಷ ಬೋಧಿ ವೃಕ್ಷಗಳ / ಚಿಗುರುಗಳೊಂದಿಗೆ’. ಹೀಗೆ ಕೆಲವು ಕವಿತೆಗಳು ವರ್ತಮಾನದ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸುವಾಗ ತನ್ನ ಕಾವ್ಯ ಗುಣವನ್ನು ಕಳೆದುಕೊಳ್ಳುವುದೂ ಇದೆ. ಆಗೆಲ್ಲ ಒಳಗಿನ ಸಿಟ್ಟಿನ ಕೈ ಮೇಲಾಗುತ್ತದೆ. ಕಾವ್ಯ ಹಿಂದೆ ಸರಿಯುತ್ತದೆ. ‘ಉಪ್ಪು’ ಈ ಸಂಕಲನದ ಅತ್ಯಂತ ಮಹತ್ವದ ಕವಿತೆ. ಪರಿಣಾಮಕಾರಿ. ಕವಿಯ ಕಾವ್ಯ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆ. ‘‘ಒಂದು ಆಸೆ ಮೂಡಿ/ ನೀಲಿ ಕಡಲಿನಿಂದೆದ್ದು ಜಿಗಿದು/ಸೂರ್ಯನ ಪ್ರಖರ ಮಿಂಚನ್ನು/ಕಣ್ಣೊಳಗೆ ಅದುಮಿಟ್ಟುಕೊಳ್ಳುವಾಗ/ನನ್ನೊಳಗಿನ ಅದಾವುದೋ ಅಗಾಧ ಶಕ್ತಿ/ಹೆಪ್ಪುಗಟ್ಟಿ ಉಪ್ಪಾದೆ...’’ ಎಂದು ಬರೆಯುತ್ತಾ, ಉಪ್ಪು ಹೇಗೆ ಎಲ್ಲ ಖಂಡಾಂತರಗಳನ್ನು ದಾಟಿ ಎಲ್ಲರೊಳಗೂ ಕರಗುತ್ತಲಿದೆ ಎನ್ನುವುದನ್ನು ಹೇಳುತ್ತದೆ. ‘‘ನನ್ನಪ್ಪ, /ಈಗಲೂ ನಾಳೆಯೂ/ ಬರಿಯ ಸೂರ್ಯನಲ್ಲ/ ಒಂದು ಗ್ಯಾಲಕ್ಸಿ’ ಎನ್ನುವ ಸಾಲುಗಳ ಮೂಲಕ ತಂದೆಯ ಅಗಾಧತೆಯನ್ನು ಪರಿಚಯಿಸುತ್ತಾರೆ ಕವಿ. ‘‘ಸಿಟ್ಟಾಗಬೇಡ,/ನಿನ್ನ ಹಾಗೆ ನಾನು ಜಾತಿಗೆ ಹುಟ್ಟಿದವನಲ್ಲ/ ಒಂದು ಅಸ್ಮಿತೆಗಾಗಿ ಗುರುತಿಸಿಕೊಂಡಿದ್ದಷ್ಟೇ/ನಾನೀಗ ದಾಳವಾಗಿದ್ದೇನೆ/ರಾಜಕೀಯ ಅಸ್ತ್ರಕ್ಕೆ ಸಿಲುಕಿ’ ಎಂದು ಹೇಳುವ ‘ಒಂದು ಅಸ್ಮಿತೆ’ ಕವಿತೆ ಹೇಗೆ ಅಸ್ಮಿತೆಗಳು ಕವಿಯನ್ನು ಚೌಕಟ್ಟಿನಲ್ಲಿ ಹಾಕಿ ಬಂಧಿಸಿದೆ ಮತ್ತು ಅದರಿಂದ ಹೊರಬರಲು ಆತನ ಹಂಬಲವನ್ನು ಹೇಳುತ್ತದೆ.
ಎಸ್. ನಟರಾಜ್ ಬೂದಾಳು ಅವರು ಈ ಕವಿತೆಯ ಕುರಿತಂತೆ ಹೀಗೆ ಬರೆಯುತ್ತಾರೆ ‘‘ಕಾವ್ಯೋದ್ಯೋಗದ ಪ್ರಮುಖ ಉದ್ದೇಶವನ್ನು ಗುರಿಯಿಟ್ಟಂತೆ ಈ ಕವನ ನುಡಿಯುತ್ತಿದೆ. ಕಾವ್ಯ ರಸಕ್ಕೋ, ಸಂಕಟ ಪರಿಹಾರಕ್ಕೋ ಎಂಬ ಪ್ರಶ್ನೆಗೆ ಉತ್ತರ ಹೇಳಬೇಕಾದ ಈ ನೆಲದ ಮೀಮಾಂಸೆಯನ್ನು ಹೊರಗೆ ನಿಲ್ಲಿಸಿ ಮಾತನಾಡುತ್ತಿದ್ದಾರೆ ಎಂಬ ಸಿಟ್ಟೊಂದು ಇಲ್ಲಿ ಮುಸುಗುಟ್ಟುತ್ತಿದೆ. ಕುದಿಬಂದ ಎಸರಿನಂತಿರುವ ನೂರುಲ್ಲಾ ಕವನಗಳು ನಟ್ಟ ನಡು ಬಯಲಲ್ಲಿ ಮೂರು ಗುಂಡು ಹೂಡಿ, ಸಂಸಾರ ಮಾಡಿಯೇ ಸಿದ್ಧ ಎನ್ನುವ ಅಲೆಮಾರಿ ಹೆಣ್ಣನ್ನು ನೆನಪಿಸುತ್ತಿವೆ....’’
ಕಾವ್ಯಮನೆ ಪ್ರಕಾಶನ ಬಳ್ಳಾರಿ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 108. ಮುಖಬೆಲೆ 90. ಆಸಕ್ತರು 97384 54892 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News