15 ಸಾವಿರ ರೂ. ವೆಚ್ಚದಲ್ಲಿ ಮಿನಿ ಉಪಗ್ರಹ ನಿರ್ಮಿಸಿದ ತಮಿಳುನಾಡು ವಿದ್ಯಾರ್ಥಿಗಳು !

Update: 2018-07-14 07:33 GMT

ಚೆನ್ನೈ, ಜು. 14: ಇಲ್ಲಿಗೆ ಸಮೀಪದ ಕೆಳಂಬಕ್ಕಂ ಎಂಬಲ್ಲಿನ ಹಿಂದುಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸಯನ್ಸ್ ಇಲ್ಲಿನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ‘ಜೈ ಹಿಂದ್-1ಎಸ್’ ಎಂಬ ಹೆಸರಿನ ಹೊಸ ಪ್ರಾಯೋಗಿಕ ಉಪಗ್ರಹವೊಂದನ್ನು ವಿನ್ಯಾಸಗೊಳಿಸಿದ್ದು ಇದು ಜಗತ್ತಿನ ಅತಿ ಅಗ್ಗದ ಹಾಗೂ ಅತಿ ಹಗುರದ ಉಪಗ್ರಹ ಎಂದು ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಈ ಉಪಗ್ರಹವನ್ನು ನಮ್ಮ ಅಂಗೈಯಲ್ಲಿಯೇ ಹಿಡಿಯಬಹುದಾಗಿದ್ದು ಅದನ್ನು 15,000 ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಅದರ ತೂಕ ಒಂದು ಸಾಧಾರಣ ಗಾತ್ರದ ಮೊಟ್ಟೆಗಿಂತಲೂ ಕಡಿಮೆಯಾಗಿದೆ. ಈ ಉಪಗ್ರಹದ ಮೂಲಕ ಹವಾಮಾನ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಬಹುದಾಗಿದೆ.

ಜೈ ಹಿಂದ್ ಉಪಗ್ರಹವು ಒಂದು ಸಣ್ಣ ನಾಲ್ಕು ಸೆಂಮೀ ಗಾತ್ರದ ಕ್ಯೂಬ್ ನಂತಿದ್ದು ಅದನ್ನು ಆಗಸ್ಟ್ ತಿಂಗಳಲ್ಲಿ ನಾಸಾದಿಂದ ಉಡಾವಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಅದರ ತೂಕ 33.39 ಗ್ರಾಮ್ಸ್ ಆಗಿದೆ. ಅದರ ಹೊರಮೈಯ್ಯನ್ನು 3ಡಿ ಪ್ರಿಂಟ್ ಮಾಡಿದ್ದರಿಂದ ಅದು ಇಷ್ಟೊಂದು ಹಗುರವಾಗಿರಲು ಕಾರಣವಾಗಿದೆ.

ಈ ಮಿನಿ ಉಪಗ್ರಹವನ್ನು ಬಲೂನಿನಲ್ಲಿ ಅಥವಾ ರಾಕೆಟ್ ಮೂಲಕ ಬಾಹ್ಯಾಕಾಶದಲ್ಲಿ ಸೇರಿಸಲಾಗುವುದು. ಜೈಹಿಂದ್ ಉಪಗ್ರಹಕ್ಕೆ 20 ವಿಭಿನ್ನ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಪ್ರತಿ ಸೆಕೆಂಡಿಗೆ ನಾಲ್ಕು ವಿಭಿನ್ನ ಮಾನದಂಡಗಳ ಆಧಾರದಲ್ಲಿ ಅದು ಮಾಹತಿ ಸಂಗ್ರಹಿಸುವುದು. ಸಂಗ್ರಹಿಸಿದ ಮಾಹಿತಿ ಎಸ್‌ಡಿ ಕಾರ್ಡ್ ನಲ್ಲಿ ದಾಖಲಾಗುತ್ತದೆ. ಉಪಗ್ರಹದಲ್ಲಿರುವ ಸೆನ್ಸರ್ ಮೊಡ್ಯೂಲ್ ಗಳು ಹವಾಮಾನ ಪರಿಸ್ಥಿತಿಯ ಅಧ್ಯಯನಕ್ಕೆ ಸಹಕರಿಸುತ್ತವೆ.

ಈ ಉಪಗ್ರಹವನ್ನು ಕಳೆದ ವಾರ ನಾಸಾಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News